ಬೆಳಗಾವಿ: ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿ ನಕಲಿ ಪಿ ಎಸ್ ಐ ಓರ್ವನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಕುಮಾರ್ ಬರಲಿ (28) ಬಂಧಿತ ಆರೋಪಿ. ಬಂಧಿತ ಆರೋಪಿ ವಿಜಯ್ ಕುಮಾರ್, ಪಿಎಸ್ ಐ ಅನೀಲ್ ಕುಮಾರ್ ಅವರ ಹೆಸರಲ್ಲಿ ನಕಲಿ ಇನ್ ಸ್ಟಾ ಗ್ರಾಂ ಖಾತೆ ತೆರೆದು ತಾನು ಪಿಎಸ್ ಐ ಎಂದು ಹೇಳಿಕೊಂಡು 50ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ. ಈ ಬಗ್ಗೆ ಪಿ ಎಸ್ ಐ ಅನೀಲಕುಮಾರ್ ಬೆಳಗಾವಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ ಸ್ಟಾಗ್ರಾಂ ಮೂಲಕ ಯುವತಿಯರು, ಮಹಿಳೆಯರ ಸ್ನೇಹ ಬೆಳೆಸಿ ಉದ್ಯೋಗ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡಿ ಅವರಿಂದಲೇ 4 ಲಕ್ಷ ರೂಪಾಯಿ ಹಣವನ್ನು ಪಡೆದು ಹಲವರಿಗೆ ಮೋಸ ಮಾಡಿದ್ದ. ಅಲ್ಲದೇ 9 ನಕಲಿ ಇನ್ ಸ್ಟಾಗ್ರಾಂ ಐಡಿ ಕ್ರಿಯೆಟ್ ಮಾಡಿದ್ದ ಎಂದು ತಿಳಿದುಬಂದಿದೆ. ಇದೀಗ ಆರೋಪಿಯನ್ನು ಬಂಧಿಸಿರುವ ಬೆಳಗಾವಿ ಸಿಇ ಎನ್ ಠಾಣೆ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.