ವಿಶ್ವದಾದ್ಯಂತ ಶೇ.50ರಷ್ಟು ಕಂಪನಿಗಳು ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿವೆ. ಒಂದಷ್ಟು ಕಂಪನಿಗಳು ಬೋನಸ್‌ಗಳನ್ನು ಕಡಿಮೆ ಮಾಡುತ್ತಿವೆ. ಆರ್ಥಿಕ ಹಿಂಜರಿತದ ಮಧ್ಯೆ ಉದ್ಯೋಗಿಗಳಿಗೆ ನೀಡ್ತಾ ಇದ್ದ ಇತರ ಕೊಡುಗೆಗಳನ್ನು ಸಹ ರದ್ದುಗೊಳಿಸುತ್ತಿವೆ.
ಅಮೆರಿಕದಲ್ಲಿ ಇತ್ತೀಚೆಗೆ ನಡೆಸಲಾದ PwC ‘ಪಲ್ಸ್: ಮ್ಯಾನೇಜಿಂಗ್ ಬಿಸಿನೆಸ್ ರಿಸ್ಕ್ ಇನ್ 2022’ ಸಮೀಕ್ಷೆಯ ಪ್ರಕಾರ, 50 ಪ್ರತಿಶತದಷ್ಟು ಕಂಪನಿಗಳು ತಮ್ಮ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಕಂಪನಿಗಳ ಮುಖ್ಯಸ್ಥರು ಪ್ರತಿಭಾವಂತರನ್ನು ನೇಮಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಬಗ್ಗೆ ಕಾಳಜಿ ವಹಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇಂತಹ ಬೆಳವಣಿಗೆಗಳು ನಡೆಯುತ್ತಲೇ ಇವೆ.
ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬದಲು ಸರಿಯಾದ ಕೌಶಲ್ಯ ಹೊಂದಿರುವವರನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗುತ್ತಿವೆ. ಶೇ.50ರಷ್ಟು ಕಂಪನಿಗಳು ಉದ್ಯೋಗ ಕಡಿತ ಮಾಡಿದ್ರೆ, ಶೇ.46ರಷ್ಟು ಕಂಪನಿಗಳು ಬೋನಸ್‌ಗೆ ಕತ್ತರಿ ಹಾಕುತ್ತಿವೆ. ಶೇ.44ರಷ್ಟು ಕಂಪನಿಗಳು ಇತರ ಆಫರ್‌ಗಳನ್ನು ರದ್ದು ಮಾಡುತ್ತಿವೆ. ಮೈಕ್ರೋಸಾಫ್ಟ್ ಮತ್ತು ಮೆಟಾನಂತಹ ದೊಡ್ಡ ಟೆಕ್ ಕಂಪನಿಗಳು ಅಮೆರಿಕದಲ್ಲಿ ಜುಲೈವರೆಗೆ 32,000 ಕ್ಕೂ ಹೆಚ್ಚು ಕೆಲಸಗಾರರನ್ನು ವಜಾಗೊಳಿಸಿವೆ.
ಭಾರತದಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ 25,000 ಕ್ಕೂ ಹೆಚ್ಚು ಸ್ಟಾರ್ಟಪ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಈ ವರ್ಷ 12,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಉದ್ಯೋಗಿಗಳ ಕೊರತೆ ನೀಗಿಸಲು ಕಂಪನಿಗಳು ಯಾಂತ್ರೀಕರಣಕ್ಕೆ ಹೂಡಿಕೆ ಮಾಡುವ ಸಾಧ್ಯತೆಯಿದೆ. ಜಾಗತಿಕ ಸಲಹಾ ಸಂಸ್ಥೆ 700ಕ್ಕೂ ಹೆಚ್ಚು ಅಮೆರಿಕದ ಕಾರ್ಯನಿರ್ವಾಹಕರು ಮತ್ತು ಮಂಡಳಿಯ ಸದಸ್ಯರನ್ನು ಸಮೀಕ್ಷೆ ನಡೆಸಿದೆ. ಹೆಚ್ಚುತ್ತಿರುವ ಆರ್ಥಿಕ ಅನಿಶ್ಚಿತತೆಯೇ ಉದ್ಯೋಗ ಕಡಿತಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.