ಮುಂಬೈನ ವಸತಿ ಕಾಲೋನಿಯೊಂದರ ಪುನರಾಭಿವೃದ್ಧಿ ಯೋಜನೆಯಾದ ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಹಿರಿಯ ನಾಯಕ ಸಂಜಯ್ ರಾವತ್ ಗೆ ಕೊನೆಗೂ ಜಾಮೀನು ಮಂಜೂರಾಗಿದೆ.
ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಹಿರಿಯ ನಾಯಕ ಮತ್ತು ಅವರ ಆಪ್ತರಲ್ಲಿ ಒಬ್ಬರಾದ ಸಂಜಯ್ ರಾವುತ್ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಇಂದು ಜಾಮೀನು ಮಂಜೂರು ಮಾಡಿದೆ.
ರಾಜ್ಯಸಭಾ ಸದಸ್ಯರಾಗಿರುವ ಫೈರ್ಬ್ರಾಂಡ್ ನಾಯಕ ಸಂಜಯ್ ರಾವತ್ ಕಳೆದ ಮೂರೂವರೆ ತಿಂಗಳಿನಿಂದ ಜೈಲಿನಲ್ಲಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 21 ರಂದು ಕಾಯ್ದಿರಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿತವಾಗಿರುವ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ, ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ರಾವತ್ ಜಾಮೀನು ಅರ್ಜಿಯನ್ನು ಅನುಮತಿಸಿದರು.
ಉಪನಗರ ಗೋರೆಗಾಂವ್ನಲ್ಲಿನ ಪತ್ರಾ ಚಾಲ್ (ಸಾಲು ವಠಾರ) ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಅಕ್ರಮಗಳಲ್ಲಿ ಅವರ ಪಾತ್ರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಜುಲೈನಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಬಂಧಿಸಿತ್ತು.
ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ತಮ್ಮ ವಿರುದ್ಧದ ಪ್ರಕರಣವು ಅಧಿಕಾರದ ದುರುಪಯೋಗ ಮತ್ತು ರಾಜಕೀಯ ಸೇಡಿನಿಂದ ಕೂಡಿದೆ ಎಂದು ಸಂಜಯ್ ರಾವತ್ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ.