ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಆವಿಷ್ಕಾರೀ ಮಾರ್ಗವೊಂದನ್ನು ಕಂಡುಕೊಂಡಿರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಉದ್ದೇಶಿತ ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು ಮುಂದಾಗಿದೆ.
ಈ ಬಹುಮಾನವನ್ನು ಮಧ್ಯಂತ ಹಾಗೂ ಅಂತಿಮಗಳೆಂಬ ಎರಡು ಹಂತಗಳಲ್ಲಿ ನೀಡಲಾಗುವುದು.
ಮೀಸಲಿನಲ್ಲಿರುವ ಮೊತ್ತದ ಎರಡೂವರೆ ಪ್ರತಿಶತ ಅಥವಾ ಐದು ಲಕ್ಷ ರೂಗಳು ಅಥವಾ ಇವೆರಡಲ್ಲಿ ಯಾವುದು ಕಡಿಮೆಯೋ ಅದನ್ನು ಮಧ್ಯಂತರ ಬಹುಮಾನ ಹಾಗೂ ಅಂತಿಮ ಬಹುಮಾನವಾಗಿ ವಸೂಲು ಮಾಡಲಾದ ಮೊತ್ತದ 10 ಪ್ರತಿಶತ ಅಥವಾ 20 ಲಕ್ಷ ರೂಗಳಲ್ಲಿ ಯಾವುದು ಕಡಿಮೆಯೋ ಅದನ್ನೇ ನೀಡಲಾಗುವುದು.
“ಹೀಗೆ ನೀಡಲಾದ ಮಾಹಿತಿ ಹಾಗೂ ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು,” ಎಂದು ಸೆಬಿ ಈ ವಿಚಾರವಾಗಿ ತಾನು ಹೊರತಂದಿರುವ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ’ವಸೂಲು ಮಾಡಲು ಕಠಿಣ’ ಎನ್ನಬಹುದಾದಷ್ಟು ಬಾಕಿ ಉಳಿಸಿಕೊಂಡಿರುವ ಸುಸ್ಥಿದಾರರ ಕುರಿತು ವಿಶ್ವಾಸಾರ್ಹ ಮಾಹಿತಿಗಳನ್ನು ಕೊಡಮಾಡುವ ಮಾಹಿತಿದಾರರನ್ನು ಈ ಬಹುಮಾನಕ್ಕೆ ಪರಿಗಣಿಸಲಾಗುವುದು ಎಂದು ಸೆಬಿ ಇದೇ ವೇಳೆ ತಿಳಿಸಿದೆ.
ಬಾಕಿ ವಸೂಲಾತಿಗೆ ಇರುವ ಎಲ್ಲಾ ಮಾರ್ಗಗಳನ್ನು ಬಳಸಿದ ಬಳಿಕವೂ ಸುಸ್ಥಿದಾರರಿಂದ ಹಣ ವಸೂಲು ಮಾಡಲಾಗದೇ ಇದ್ದಲ್ಲಿ ಈ ಆಯ್ಕೆಯನ್ನು ಸೆಬಿ ಬಳಸಲಿದೆ.
ಈ ಸಂಬಂಧ 515 ಸುಸ್ಥಿದಾರರ ಹೆಸರುಗಳನ್ನು ಸೆಬಿ ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿಗಳನ್ನು ಒದಗಿಸುವಂತೆ ಕೋರಿದೆ.
ಈ ಬಹುಮಾನಕ್ಕೆ ಮಾನ್ಯತೆಗಳನ್ನು ನಿರ್ಧರಿಸುವ ಉದ್ದೇಶಕ್ಕಾಗಿ ವಸುಲಾತಿ ಹಾಗೂ ರೀಫಂಡ್ ಇಲಾಖೆಯ ಮುಖ್ಯ ಮಹಾ ನಿರ್ದೇಶಕ ಹಾಗೂ ವಸೂಲಾತಿ ಅಧಿಕಾರಿ ಹಾಗೂ ಸಂಬಂಧಪಟ್ಟ ವಸೂಲಾತಿಯ ವ್ಯಾಪ್ತಿಯ ಅಧಿಕಾರಿ ಹಾಗೂ ಹೂಡಿಕೆದಾರರ ಸಲಹೆ ಮತ್ತು ಶಿಕ್ಷಣದ ಕಾರ್ಯಾಲಯದ ಉನ್ನತ ಸಿಬ್ಬಂದಿಯನ್ನು ಈ ಸಮಿತಿಯಲ್ಲಿ ನೇಮಕ ಮಾಡಲಾಗುವುದು.
ಹೂಡಿಕೆದಾರರ ರಕ್ಷಣೆ ಹಾಗು ಶಿಕ್ಷಣ ನಿಧಿಯಿಂದ ಬಹುಮಾನಿತರಿಗೆ ಪುರಸ್ಕಾರದ ಮೊತ್ತಗಳನ್ನು ವಿತರಿಸಲಾಗುವುದು ಎಂದು ಸೆಬಿ ತಿಳಿಸಿದೆ.
ಸೆಬಿ ಸಲ್ಲಿಸಿದ 2021-22ರ ವಾರ್ಷಿಕ ವರದಿಯನುಸಾರ, ಮಾರ್ಚ್ 2022ರಂತೆ 67,228 ಕೋಟಿ ರೂಗಳನ್ನು ವಸೂಲು ಮಾಡಲು ಕಠಿಣ (ಡಿಟಿಆರ್) ಎಂದು ಘೋಷಿಸಲಾಗಿದೆ.