ಚಿಕ್ಕಮಗಳೂರು: ಚಿಕ್ಕಮಗಳೂರಿನ ಮುಗುರಳ್ಳಿ ಗ್ರಾಮದ ಬಳಿ ನಿರ್ಮಿಸಲಾಗಿರುವ ನೂತನ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮುಗುರಳ್ಳಿ ಗ್ರಾಮದಲ್ಲಿ ನೂತನ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಉದ್ಘಾಟನೆಗೂ ಸಿದ್ಧವಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಸೇತುವೆಯ ತಡೆಗೋಡೆಗಳು ಕುಸಿದು ಹೋಗಿವೆ. ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣಾರ್ಭಟ ಮತ್ತೆ ಜೋರಾಗಿದ್ದು, ಸೇತುವೆ ಕುಸಿಯುವ ಭೀತಿ ಎದುರಾಗಿದೆ.
ತಡೆಗೋಡೆ ಕುಸಿತವಾದ ಬೆನ್ನಲ್ಲೇ ಸೇತುವೆಯ ಬಳಿ ರಸ್ತೆ ಬಿರುಕು ಬಿಟ್ಟಿದೆ. ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಉದ್ಘಾಟನೆಗೂ ಮುನ್ನವೇ ಇಂತಹ ದುಸ್ಥಿತಿಗೆ ಸೇತುವೆ ತಲುಪಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.