ಭಾರತವು ಲಸಿಕಾಕರಣಕ್ಕೆ ಒತ್ತು ನೀಡಿ, ತನ್ನ ಪ್ರತಿರಕ್ಷಣೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಇಂತಾ ಸುದ್ದಿಗಳ ನಡುವೆ, ಯುಪಿ ಪೊಲೀಸ್ ವಿಶೇಷ ಕಾರ್ಯಪಡೆ ಬುಧವಾರ ವಾರಣಾಸಿಯಲ್ಲಿ ನಕಲಿ ಲಸಿಕೆ ರಾಕೆಟ್ ಅನ್ನು ಭೇದಿಸಿದೆ. ರೋಹಿತ್ ನಗರ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ನಕಲಿ ಲಸಿಕೆ ದಂಧೆ ನಡೆಸುತ್ತಿದ್ದರು ಎಂದು ಮಾಹಿತಿ ನೀಡಿರುವ, ಯುಪಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರಿಂದ, 4 ಕೋಟಿ ಮೌಲ್ಯದ ನಕಲಿ ಕೋವಿಶೀಲ್ಡ್ ಮತ್ತು ಝೈಕೋವ್-ಡಿ ಲಸಿಕೆ ಬಾಟಲಿಗಳು, ಪರೀಕ್ಷಾ ಕಿಟ್‌ಗಳು, ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ನಕಲಿ ಲಸಿಕೆಗಳು, ಕಿಟ್‌ಗಳು ಮತ್ತು ಇಂಜೆಕ್ಷನ್‌ಗಳನ್ನು ತಯಾರಿಸಲು ಬಳಸಲಾದ ಹಲವಾರು ಯಂತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಐವರನ್ನು ವಾರಣಾಸಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ಕೊರೊನಾದಿಂದ ಶಾಲೆಗಳು ಬಂದ್….! ಬಿಹಾರದ ವಿದ್ಯಾರ್ಥಿಗಳೀಗ ಅಕ್ರಮ ಮದ್ಯ ಪೂರೈಕೆದಾರರು
ನಕಲಿ ದಂಧೆಯ ನಾಯಕ ರಾಕೇಶ್ ತವಾನಿ ವಿರುದ್ಧ ಈಗಾಗಲೇ ಕ್ರಿಮಿನಲ್ ದಾಖಲೆಗಳಿವೆ. ಅವನನ್ನು ಪ್ರತ್ಯೇಕ ಪ್ರಕರಣವೊಂದರಲ್ಲಿ, 2018 ರಲ್ಲಿ ಬಂಧಿಸಲಾಗಿದೆ. ಸಧ್ಯ ಜಾಮೀನಿನ ಮೇಲೆ ಹೊರಗಿರುವ ಈತ, ಸಂದೀಪ್ ಶರ್ಮಾ, ಲಕ್ಷ್ಯ ಜಾವಾ, ಅರುಣೇಶ್ ವಿಷ್ಕರ್ಮ ಮತ್ತು ಶಂಶೇರ್ ಎಂಬುವವರನ್ನ ಸೇರಿಸಿಕೊಂಡು ನಕಲಿ ಲಸಿಕೆ ದಂಧೆ ನಡೆಸುತ್ತಿದ್ದ.
ಈ ಗುಂಪಿನ ನಾಯಕ ಹಾಗೂ ಉಳಿದವರು, ನಕಲಿ ಲಸಿಕೆಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಸಿದ್ಧಪಡಿಸುತ್ತಿದ್ದರು. ತನ್ನ ಜಾಲವನ್ನು ಬಳಸಿಕೊಂಡು ವಿವಿಧ ರಾಜ್ಯಗಳಿಗೆ ನಕಲಿ ಪರೀಕ್ಷೆ ಮತ್ತು ಲಸಿಕೆಯನ್ನು ಪೂರೈಸುವುದು ಲಕ್ಷ್ಯನ ಕೆಲಸವಾಗಿತ್ತು ಎಂದು ರಾಕೇಶ್ ತನ್ನ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆಂದು ಎಸ್‌ಟಿಎಫ್ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಈ ದಂಧೆಯಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.