ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ನಾಗ್ಲಾ ಗುಲೆರಿಯಾ ಎಂಬಲ್ಲಿ ರೈಲು ಹಳಿ ಡ್ಯಾಮೇಜ್ ಆಗಿತ್ತು. ಇದನ್ನು ಗಮನಿಸಿದ ಮಹಿಳೆ ಆ ಜಾಗದಲ್ಲಿ ಕೆಂಪನೆಯ ಬಟ್ಟೆಯೊಂದನ್ನು ಹಾಕಿ ರೈಲು ಚಾಲಕನನ್ನು ಅಲರ್ಟ್ ಮಾಡಲು ಪ್ರಯತ್ನಿಸಿದ್ದಾಳೆ.
ಕಾಕತಾಳೀಯ ಎಂಬಂತೆ ಆಕೆ ಕೆಂಪು ಸೀರೆ ಉಟ್ಟಿದ್ದಳು. ಚಾಲಕನಿಗೆ ಅರಿವಾಗಲಿ ಎಂಬ ಕಾರಣಕ್ಕೆ ರೈಲಿನತ್ತ ಓಡೋಡಿ ಬಂದು ಮುಂದೆ ಅಪಾಯವಿದೆ ಎಂಬ ಸಂದೇಶ ಕೊಟ್ಟಿದ್ದಾಳೆ. ಇದನ್ನು ಅರಿತ ಲೋಕೋ ಪೈಲಟ್ ಎಮರ್ಜೆನ್ಸಿ ಬ್ರೇಕ್ ಒತ್ತಿ ರೈಲನ್ನು ನಿಲ್ಲಿಸಿದ್ದಾನೆ.
ಕೂಡಲೇ ಹಿರಿಯ ರೈಲ್ವೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ಥಿ ಮಾಡಿಸಿದ್ರು. ಸುಮಾರು 45 ನಿಮಿಷಗಳ ನಂತರ ರೈಲು ಅಲ್ಲಿಂದ ಹೊರಟಿದೆ. ಆ ರೈಲಿನಲ್ಲಿ 150 ಪ್ರಯಾಣಿಕರಿದ್ದರು. ಓಮ್ವತಿ ಎಂಬ ಈ ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಯಾರಿಗೂ ಅಪಾಯವಾಗಿಲ್ಲ.
ಬೆಳಗ್ಗೆ 8 ಗಂಟೆ ಸುಮಾರಿಗೆ ರೈಲು ಆಗಮಿಸುವ ವಿಚಾರ ಓಮ್ವತಿಗೆ ತಿಳಿದಿತ್ತು. ರೈಲ್ವೆ ಹಳಿಗೆ ಸಮೀಪದಲ್ಲಿಯೇ ಆಕೆಯ ಮನೆ ಇದೆ. ಹಾಗಾಗಿ ಹಳಿ ಹಾಳಾಗಿರುವುದನ್ನು ಗಮನಿಸಿದ ಆಕೆ ಪ್ರಯಾಣಿಕರ ಪ್ರಾಣ ಕಾಪಾಡಲು ಈ ರೀತಿ ಮಾಡಿದ್ದಾಳೆ.
ಓಮ್ವತಿಯ ಸಮಯ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ರೈಲು ಚಾಲಕ ಆಕೆಗೆ ಧನ್ಯವಾದ ಹೇಳಿದ್ದಲ್ಲದೆ 100 ರೂಪಾಯಿ ಕೊಟ್ಟಿದ್ದಾನಂತೆ. ಆರಂಭದಲ್ಲಿ ಆಕೆ ಅದನ್ನೂ ಸ್ವೀಕರಿಸಲು ಒಪ್ಪಿರಲಿಲ್ಲ. ಬಳಿಕ ಎಲ್ಲರೂ ಒತ್ತಾಯ ಮಾಡಿದ್ದರಿಂದ ಹಣ ಪಡೆದಿದ್ದಾಳೆ.