
ತುಮಕೂರು: ಉಚಿತ ಭಾಗ್ಯಗಳ ಮುಂದೆ ನಮ್ಮ ಅಭಿವೃದ್ಧಿ ಕೆಲಸ ಕೊಚ್ಚಿಕೊಂಡು ಹೋಯಿತು. ಅಭಿವೃದ್ಧಿ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕುತ್ತೆ ಅಂದುಕೊಂಡಿದ್ದೆ. ಆದರೆ ಇವರ ಭಾಗ್ಯಗಳ ಮುಂದೆ ನಮ್ಮ ಕೆಲಸಗಳು ಕೊಚ್ಚಿಹೋದವು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ಶಾಸಕರಿದ್ದಾರೆ. ಪ್ರತಿಫಲ ಸಿಗದಿರುವುದು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಮಾತ್ರ ಅಲ್ಲ. ಜನರಿಗೆ ಊರಿನ ಕೆಲಸ, ಕ್ಷೇತ್ರದ ಕೆಲಸ ಎಂದು ಅನಿಸಿಲ್ಲ. ಅವರಿಗೆ ಕಾಂಗ್ರೆಸ್ ನವರು ಕೊಡುವ ಅಕ್ಕಿ, ದುಡ್ದೇ ಶ್ರೇಷ್ಠವಾಯಿತು ಎಂದು ಬೇಸರಿಸಿದರು.
ಇನ್ನುಮುಂದೆ ಉಚಿತ ಭಾಗ್ಯಗಳ ಮುಂದೆ ನಾವು ಚುನಾವಣೆ ಮಾಡುವುದು ಕಷ್ಟವಾಗುತ್ತದೆ. ರಾಜ್ಯದ ತೆರಿಗೆ ದುಡ್ಡನ್ನು ಇಷ್ಟಬಂದಂತೆ ಹಂಚುತ್ತೇನೆ, ಮನೆಯಲ್ಲಿ ಕೂತವರಿಗೆ ಹಂಚುತ್ತೇನೆ ಅಂದ್ರೆ ರಾಜ್ಯದ ಪರಿಸ್ಥಿತಿ ಏನಾಗಬೇಡ? ಕಾಂಗ್ರೆಸ್ ಮಾಡಿದ ಪಾಪಕ್ಕೆ ಮೋದಿ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.