ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನರಿಗೆ 10ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ನಾವು ಘೋಷಣೆ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಉಚಿತ ಯೋಜನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಶಕ್ತಿಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಉಚಿತವಾಗಿ ಅಕ್ಕಿ ಕೊಡುವ ಪ್ರಯತ್ನ ನಾವು ಮಾಡುತ್ತೇವೆ. ಆದರೆ ಕೇಂದ್ರ ಸರ್ಕಾರ ಉಚಿತ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕೇಂದ್ರ ಎಷ್ಟೇ ಷಡ್ಯಂತ್ರ ಮಾಡಿದರೂ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಖಾಸಗಿಯವರಿಗೆ ಅಕ್ಕಿ ಪೂರೈಕೆ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಪೂರೈಸುತ್ತಿಲ್ಲ. ಕೇಂದ್ರ ನಮಗೇನು ಪುಕ್ಕಟೆಯಾಗಿ ಕೊಡುತ್ತಿಲ್ಲ. ನಾವು ಕೇಂದ್ರಕ್ಕೆ ದುಡ್ಡು ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ನಮಗೆ ಅಕ್ಕಿ ಪೂರೈಸುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಅಕ್ಕಿ ಪೂರೈಸಲು ಛತ್ತಿಸ್ ಗಢ ಸರ್ಕಾರಕ್ಕೂ ಮನವಿ ಮಾಡಿದ್ದೆವು. ಪಂಜಾಬ್ ಸರ್ಕಾರಕ್ಕೂ ಕೇಳಿದ್ದೇವೆ. ಪಂಜಾಬ್ ಮುಂದಿನ ವರ್ಷದಿಂದ ಕೊಡುವುದಾಗಿ ತಿಳಿಸಿದೆ. ನಾಳೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತೆಲಂಗಾಣಕ್ಕೆ ತೆರಳಿ ಅಲ್ಲಿನ ಸರ್ಕಾರದ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
5 ಕೆಜಿ ಅಕ್ಕಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ 10 ಕೆಜಿ ಅಕ್ಕಿ ಪೂರೈಕೆ, ನಮಗೆ ಬಂದ ತಕ್ಷಣದಿಂದಲೇ ವಿತರಿಸಲಾಗುವುದು ಎಂದರು. ಈ ಮೂಲಕ ಜುಲೈ 1ರಿಂದ ಜಾರಿಯಾಗಬೇಕಿದ್ದ 10 ಕೆಜಿ ಅನ್ನಭಾಗ್ಯ ಅಕ್ಕಿ ಯೋಜನೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.