ಬೆಳಗಾವಿ: ಉಚಿತ ಅಕ್ಕಿ ನೀಡಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು, ಅಕ್ಕಿಗೆ ನೀಡುವ ಚೀಲ ಮಾತ್ರ ಸಿದ್ದರಾಮಯ್ಯನವರದ್ದು ಎಂಬ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಅಕ್ಕಿ ಮೋದಿ ಸರ್ಕಾರದ್ದು, ಚೀಲ ಮಾತ್ರ ಸಿದ್ದರಾಮಯ್ಯಂದು ಅಂತಾರೆ ಹಾಗಾದ್ರೆ ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಯಾಕೆ ಉಚಿತ ಅಕ್ಕಿ ಕೊಡ್ತಿಲ್ಲ? ಅಲ್ಲಿ ಯಾಕೆ ಇಂತಹ ಯೋಜನೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರಿಗೆ ಉಚಿತ ಅಕ್ಕಿ ನೀಡಿದೆವು. ಕರ್ನಾಟಕದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಉಚಿತ ಅಕ್ಕಿ ವಿತರಿಸಿದೆವು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು. ಸಾಲದ್ದಕ್ಕೆ ಉಚಿತ ಅಕ್ಕಿ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಹೇಳಿಕೊಳ್ಳುತ್ತಿವೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಉತ್ತರ ಕೊಡಲಿಲ್ಲ. ಬಿಜೆಪಿ ನಾಯಕರು ಸುಳ್ಳು ಹೇಳಿ ರಾಜ್ಯದ ಜನತೆಗೆ ವಂಚಿಸುತ್ತಿದ್ದಾರೆ ಎಂದು ವಾಗ್ದಾಳಿ ನದೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.
ಇದೇ ವೇಳೆ ನಾನು ಸಿಎಂ ಬೊಮ್ಮಾಯಿ ಅವರು ಅತಿ ಭ್ರಷ್ಟ ಸಿಎಂ ಎಂದು ಹೇಳಿದರೆ ಲಿಂಗಾಯಿತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿದ್ದಾರೆ ಎಂದು ನನ್ನ ಹೇಳಿಕೆ ತಿರುಚಿ ಲಿಂಗಾಯಿತ ಸಮುದಾಯಕ್ಕೆ ಅವಮಾನ ಮಾಡಿದ್ದೇನೆ ಎಂದು ಸುಳ್ಳು ಆರೊಪ ಮಾಡುತ್ತಿದ್ದಾರೆ. ಎಂತಹ ನೀಚ ಜನರು ಇವರು. ನನ್ನ ಹೇಳಿಕೆ ತಿರುಚಿ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.