ಕೈವ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ನಾಗರಿಕ ವಿಮಾನ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಕರ್ನಾಟಕದ 10 ವಿದ್ಯಾರ್ಥಿಗಳು ಸೇರಿದಂತ ಭಾರತದ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಕ್ರೇನ್ ನಲ್ಲಿ ರಾಜ್ಯದ 10 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ 10 ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ಬಸ್ ನಲ್ಲಿ ಬರುತ್ತಿದ್ದರು. ಆದರೆ ವಿಮಾನ ಹಾರಾಟ ಸ್ಥಗಿತಗೊಂಡಿದ್ದರಿಂದ ಸಮಸ್ಯೆಯಾಗಿದೆ. ಅವರು ಬಸ್ ನಲ್ಲಿಯೇ ಇರುವಂತಾಗಿದೆ. ಹಾಗಾಗಿ ವಿದ್ಯಾರ್ಥಿಗಳನ್ನು ಕರೆ ತರುವ ವ್ಯವಸ್ಥೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ವಿದ್ಯಾರ್ಥಿಗಳ ಜತೆಯೂ ಸಂಪರ್ಕದಲ್ಲಿದ್ದೇನೆ. ಬಸ್ ನಲ್ಲಿಯೇ ವಿದ್ಯಾರ್ಥಿಗಳಿರುವುದರಿಂದ ಅವರು ಎಲ್ಲಿಗೆ ಬರಬೇಕು? ಸುರಕ್ಷಿತ ಸ್ಥಳ ಯಾವುದು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.