ರಷ್ಯಾದಿಂದ ಆಕ್ರಮಣಕ್ಕೊಳಗಾಗಿರೋ ಉಕ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರುವ ಕಾರ್ಯ ಭರದಿಂದ ನಡೀತಿದೆ. ಹೇಗಾದ್ರೂ ಮಾಡಿ ಉಕ್ರೇನ್ ಅನ್ನು ತೊರೆಯಿರಿ ಅಂತಾ ಭಾರತ ಸರ್ಕಾರ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಭಾರತೀಯ ವಿದ್ಯಾರ್ಥಿಯೊಬ್ಬ ಉಕ್ರೇನ್ ನಿಂದ ಹೊರಹೋಗಲು ರೈಲಿನಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ಸಲುವಾಗಿ ತನ್ನ ಐಪಾಡ್ ಅನ್ನೇ ಮಾರಾಟ ಮಾಡಿದ್ದಾನೆ. ವಿದ್ಯಾರ್ಥಿಗಳೆಲ್ಲ ಉಕ್ರೇನ್ ನ ಮೆಟ್ರೋ ಸ್ಟೇಶನ್ ನಲ್ಲಿ ಆಶ್ರಯ ಪಡೆದಿದ್ರು. ಆದ್ರೆ ನಿಲ್ದಾಣದ ಎದುರೇ ಬಾಂಬ್ ಸ್ಫೋಟಗೊಂಡು, ಹಲವರು ಗಾಯಗೊಂಡಿದ್ದಾರೆ.
ಇದನ್ನೆಲ್ಲ ಕಣ್ಣಾರೆ ಕಂಡಿದ್ದ ಕೇರಳದ ವಿದ್ಯಾರ್ಥಿ ಜೊಲ್ ಜೊಪ್ಸನ್, ಹೇಗಾದ್ರೂ ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ಕಾಲ್ನಡಿಗೆಯಲ್ಲೇ ಖಾರ್ಕಿವ್ ನ ವೋಕ್ಜಲ್ ರೈಲು ನಿಲ್ದಾಣ ತಲುಪಿದ. ಅದೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಆತನ ಸೀನಿಯರ್ ಒಬ್ಬ ತನ್ನ ಐಪಾಡ್ ಅನ್ನು 15000 ರೂಪಾಯಿಗೆ ಮಾರಾಟ ಮಾಡಿ, ಟ್ರೈನ್ ಟಿಕೆಟ್ ಪಡೆದಿದ್ದಾನಂತೆ.
ಉಕ್ರೇನ್ ನಾಗರಿಕರಿಗೆ ಹೆಚ್ಚಿನ ಆದ್ಯತೆ ಇದ್ದಿದ್ದರಿಂದ ನಮಗೆ ಬೇಗನೆ ರೈಲಿನಲ್ಲಿ ಸೀಟು ಸಿಗಲಿಲ್ಲ ಅಂತಾ ಕೇರಳದ ವಿದ್ಯಾರ್ಥಿ ಹೇಳಿದ್ದಾನೆ. ಮೆಟ್ರೋ ನಿಲ್ದಾಣ ಹಾಗೂ ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದ ಹಲವು ವಿದ್ಯಾರ್ಥಿಗಳು ಸಾಕಷ್ಟು ಕಸರತ್ತು ಮಾಡಿ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಸುರಕ್ಷಿತ ತಾಣಕ್ಕೆ ತೆರಳಿದ್ದಾರೆ.