ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಯ ದುರಂತ ಸಾವಿನ ಬಳಿಕ ಆತಂಕ ಮತ್ತಷ್ಟು ಹೆಚ್ಚಾಗಿದೆ. ಆದಷ್ಟು ಬೇಗ ತವರು ಸೇರಬೇಕೆಂದು ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಇನ್ನಿಲ್ಲದ ಪ್ರಯತ್ನ ಪಡ್ತಿದ್ದಾರೆ. ಉಕ್ರೇನ್ ರಾಜಧಾನಿಯನ್ನು ವಶಕ್ಕೆ ಪಡೆಯಲು ರಷ್ಯಾ ನಿರಂತರ ದಾಳಿ ನಡೆಸ್ತಾ ಇರೋದ್ರಿಂದ ಕೀವ್ ನಗರ ಸುರಕ್ಷಿತವಲ್ಲ ಅನ್ನೋದು ಖಾತ್ರಿಯಾಗಿದೆ.
ಹಾಗಾಗಿ ಕೀವ್ ನಿಂದ ಎಲ್ವಿಲ್ ಎಂಬ ನಗರಕ್ಕೆ ಸುಮಾರು 100 ಭಾರತೀಯ ವಿದ್ಯಾರ್ಥಿಗಳು ತೆರಳಿದ್ದಾರೆ. ಪೋಲೆಂಡ್ ಗಡಿಯಲ್ಲಿರೋ ಈ ನಗರದಲ್ಲಿ ಯುದ್ಧ ಭೀತಿ ಅಷ್ಟಾಗಿ ಇಲ್ಲ. ಹಾಗಾಗಿ ತಲಾ 10 ವಿದ್ಯಾರ್ಥಿಗಳು ಗುಂಪಾಗಿ ಹರಸಾಹಸಪಟ್ಟು ರೈಲು ಏರಿದ್ದಾರೆ.
ಸುರಕ್ಷಿತವಾಗಿ ಎಲ್ವಿಲ್ ಎಂಬ ನಗರಕ್ಕೆ ಬಂದು ತಲುಪಿದ್ದಾರೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ನಮ್ಮ ಸಹಾಯಕ್ಕೆ ಬರುವವರು ಯಾರೂ ಇಲ್ಲ, ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕೆಂಬುದನ್ನು ಅರ್ಥ ಮಾಡಿಕೊಂಡು ಈ ಸಾಹಸಕ್ಕೆ ಕೈಹಾಕಿದೆವು ಅಂತಾ 20 ವರ್ಷದ ವಿದ್ಯಾರ್ಥಿನಿ ಆಶ್ನಾ ಪಂಡಿತ್ ಹೇಳಿದ್ದಾರೆ.
ಗಾಜಿಯಾಬಾದ್ ಮೂಲದ ಅವಳಿಗಳಾದ ಆಶ್ನಾ ಹಾಗೂ ಅಂಶ್ ಇಬ್ಬರೂ ಉಕ್ರೇನ್ ನಲ್ಲಿ ಓದುತ್ತಿದ್ದಾರೆ. ಕೀವ್ ನಿಂದ ಸೇಫಾಗಿ ಕರೆತರುವುದಾಗಿ ಭಾರತದ ಅಧಿಕಾರಿಗಳು ಹೇಳಿದ್ದರು, ಆದ್ರೆ ಯಾವುದೇ ಸಾರಿಗೆ ವ್ಯವಸ್ಥೆ ಮಾಡಿಲ್ಲ ಅಂತಾ ಆಶ್ನಾ ದೂರಿದ್ದಾರೆ.
100 ವಿದ್ಯಾರ್ಥಿಗಳಿಗೆ ಒಟ್ಟಾಗಿ ರೈಲು ಏರಲು ಅಲ್ಲಿನ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ಕೆಲವರನ್ನು ಹೊರದಬ್ಬಿದ್ದಾರೆ, ಇನ್ನು ಕೆಲವರನ್ನು ಥಳಿಸಿದ್ದಾರೆ. ಇದನ್ನೆಲ್ಲ ನೋಡಿದ ವಿದ್ಯಾರ್ಥಿಗಳು ಹತ್ಹತ್ತು ಮಂದಿಯ ಚಿಕ್ಕ ಚಿಕ್ಕ ಗುಂಪುಗಳಾಗಿ ರೈಲು ಏರಿದ್ದು, ಪೋಲೆಂಡ್ ಗಡಿ ತಲುಪಿದ್ದಾರೆ.
ಉಕ್ರೇನ್ ನಲ್ಲಿ ಆಹಾರ ಪದಾರ್ಥಗಳು ಸಿಗ್ತಿಲ್ಲ. ಹೊಟ್ಟೆ ತುಂಬ ಊಟವಿಲ್ಲ, ಎಟಿಎಂನಲ್ಲಿ ಹಣವೂ ಇಲ್ಲದೇ ಕಂಗಾಲಾಗಿದ್ದ ವಿದ್ಯಾರ್ಥಿಗಳು 9 ತಾಸು ರೈಲಿನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ್ದಾರಂತೆ. ತಾವು ಅನುಭವಿಸಿದ ಯಾತನೆಯನ್ನು ಆಶ್ನಾ ವಿಡಿಯೋ ಕಾಲ್ ಮೂಲಕ ಹಂಚಿಕೊಂಡಿದ್ದಾರೆ.