ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿದೆ. ಜನರು ಬದುಕುಳಿಯಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗ ಉಕ್ರೇನ್ ದೇಶಕ್ಕೆ ವಿದ್ಯಾಭ್ಯಾಸ ಮಾಡಲು ಹೋಗಿದ್ದ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಅಥವಾ ವಾಪಸ್ಸಾದವರಿಗೆ, ಮನೆವರೆಗಿನ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ಕೆ.ಎಸ್.ಆರ್.ಟಿ.ಸಿ. ಹೊಸ ತೀರ್ಮಾನ ಮಾಡಿದೆ.
ಕೆ.ಎಸ್.ಆರ್.ಟಿ.ಸಿ., ಉಕ್ರೇನ್‌ನಿಂದ ಮರಳಿದವರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಲಿದೆ ಎಂದು ನಿರ್ದೇಶಕ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ. ಈ ಸೇವೆ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿದ್ದು, ಕರ್ನಾಟಕಕ್ಕೆ ವಾಪಸ್ಸಾದವರಿಗೆ ಉಚಿತವಾಗಿ ಅವರವರ ಊರುಗಳಿಗೆ ತಲುಪಿಸಲು ಕೆ.ಎಸ್.ಆರ್.ಟಿ.ಸಿ. ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಉಕ್ರೇನ್‌ನಿಂದ ಭಾರತಕ್ಕೆ ಮರಳಿದವರು ತಮ್ಮ ಪಾಸ್ ಪೋರ್ಟ್ ಅನ್ನು ತೋರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ಪ್ರಯಾಣ ಮಾಡಬಹುದು. ಬೆಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಅವರ ಊರುಗಳಿಗೆ ಹೋಗಲು ಬಸ್ಸುಗಳನ್ನ ನಿಯೋಜಿಸಲಾಗಿದೆ. ಅದು ಆಗುವುದಿಲ್ಲವೆಂದರೆ, ಮೆಜಸ್ಟಿಕ್ ನಿಂದಲೂ ಉಚಿತ ಬಸ್ಸುಗಳ ಸೌಲಭ್ಯವಿದೆ ಎಂದು ಕಳಸದ್ ತಿಳಿಸಿದ್ದಾರೆ.
ಉಕ್ರೇನ್‌ನಿಂದ ವಾಪಾಸ್ಸಾಗುತ್ತಿರುವವರ ಕುಟುಂಬದವರು ಯಾರಾದರೂ ಮೊದಲೇ, ವಿಮಾನ ನಿಲ್ದಾಣದ ಹೆಲ್ಪ್ ಲೈನ್ ಸಂಪರ್ಕಿಸಿ ಮಾಹಿತಿ ನೀಡಿದರೆ ಇನ್ನು ಉತ್ತಮ. ಇದರಿಂದ ನಮಗೆ ಸಹಾಯವಾಗುತ್ತದೆ. ಈಗಾಗಲೇ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯು ವಿಮಾನ ನಿಲ್ದಾಣಗಳ ನೋಡಲ್ ಅಧಿಕಾರಿಗಳು ಹಾಗೂ ಚಾಲಕರಿಗೆ ಈ ಉಪಕ್ರಮದ ಬಗ್ಗೆ ತಿಳಿಸಿದ್ದು, ಮೊದಲೇ ಸಮನ್ವಯ ಮಾಡಿಕೊಂಡು ಉಚಿತ ಪ್ರಯಾಣದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು ಎಂದು ಕಳಸದ್ ಮಾಹಿತಿ ನೀಡಿದ್ದಾರೆ.