ಕಳೆದ ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿದ್ದ ರಷ್ಯಾ ಹಾಗೂ ಉಕ್ರೇನ್ನ ನಡುವಿನ ವಿವಾದವು ಇದೀಗ ಯುದ್ಧ ಸ್ವರೂಪವನ್ನು ಪಡೆದುಕೊಂಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡುತ್ತಿದ್ದಂತೆಯೇ ಉಕ್ರೇನ್ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಉಕ್ರೇನ್ನಲ್ಲಿ ಮಿಲಿಟರಿ ಸ್ವತ್ತು ಹಾಗೂ ವಾಯುನೆಲೆಗಳನ್ನು ಗುರಿಯಾಗಿಸಿರುವ ಬಗ್ಗೆ ರಷ್ಯಾವು ಒಪ್ಪಿಕೊಂಡಿದೆ. ಉಕ್ರೇನ್ನ ಜನನಿಬಿಡ ಪ್ರದೇಶಗಳಲ್ಲಿ ನಾವು ದಾಳಿ ನಡೆಸಿಲ್ಲ ಎಂದು ರಷ್ಯಾದ ಮಿಲಿಟರಿ ಪಡೆಗಳು ಹೇಳಿಕೊಂಡಿವೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಚರಣೆಯನ್ನು ಘೋಷಿಸಿದ್ದಾರೆ. ಮಾತ್ರವಲ್ಲದೇ ರಷ್ಯಾದ ಕ್ರಮದ ವಿಚಾರದಲ್ಲಿ ಮೂಗು ತೂರಿಸುವ ಯಾವುದೇ ಅನ್ಯ ರಾಷ್ಟ್ರವು ಗಂಭೀರ ಪರಿಣಾಮವನ್ನು ಎದುರಿಸುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ರಷ್ಯಾದ ಅಧ್ಯಕ್ಷರ ಈ ಘೋಷಣೆಯ ಬೆನ್ನಲ್ಲೇ ಉಕ್ರೇನ್ನ ಕೈವ್ ಹಾಗೂ ಖಾರ್ಕಿವ್ ಎಂಬಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟಗಳು ಕೇಳಿ ಬಂದಿವೆ.
ರಷ್ಯಾದ ಮಿಲಿಟರಿ ಕಾರ್ಯಾಚರಣೆ ಆರಂಭದ ಬಳಿಕ ಟ್ವೀಟ್ ಮಾಡಿದ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ, ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳುತ್ತದೆ ಹಾಗೂ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.