ಆರಂಭಿಕ ದಿನಗಳಲ್ಲಿ ಅಬ್ಬರಿಸಿದ್ದ ಕೊರೊನಾ ಸೋಂಕು ಭಾರತದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿತ್ತು. ಅದರಲ್ಲೂ ಮೊದಲನೇ ಅಲೆಗಿಂತ ಎರಡನೇ ಅಲೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸಿದ್ದು, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದರು.
ಆ ಬಳಿಕ ಕೊರೊನಾ ಸೋಂಕು ಸಂಪೂರ್ಣವಾಗಿ ಇಳಿಮುಖವಾಗಿದ್ದು, ಆದರೆ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡು ಬಂದಿತ್ತು. ಇದು ಆತಂಕ ಹುಟ್ಟಿಸಿದ್ದರ ಮಧ್ಯೆ ಇದೀಗ ಸೋಂಕು ಮತ್ತೆ ಇಳಿಮುಖವಾಗುತ್ತಾ ಸಾಗಿದ್ದು, ತಜ್ಞರೂ ಕೂಡ ಈಗ ಕಾಣಿಸಿಕೊಂಡಿರುವ ಅಲೆ ಅಷ್ಟೇನು ಪರಿಣಾಮಕಾರಿಯಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಜನಸಾಮಾನ್ಯರು ನಿಟ್ಟುಸಿರು ಬಿಡುತ್ತಿರುವ ಮಧ್ಯೆ ಮತ್ತೊಂದು ನೆಮ್ಮದಿ ಸುದ್ದಿ ಎಂಬಂತೆ, ರಾಜ್ಯದ ಐದು ಜಿಲ್ಲೆಗಳಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ ಶೂನ್ಯವಾಗಿದೆ. ಬಾಗಲಕೋಟೆ, ಬೆಳಗಾವಿ, ರಾಮನಗರ, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕೋವಿಡ್ ನ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲ.
ಇನ್ನುಳಿದಂತೆ ರಾಜ್ಯದಲ್ಲಿ ಒಟ್ಟು 670 ಸಕ್ರಿಯ ಪ್ರಕರಣಗಳು ಇದ್ದು, ಈ ಪೈಕಿ ಬೆಂಗಳೂರು ಒಂದರಲ್ಲಿಯೇ 400 ಸಕ್ರಿಯ ಪ್ರಕರಣಗಳು ಇವೆ. ಇನ್ನುಳಿದಂತೆ ಶಿವಮೊಗ್ಗ 75, ಬೆಂಗಳೂರು ಗ್ರಾಮಾಂತರ 47, ಮೈಸೂರು 30, ಉತ್ತರ ಕನ್ನಡ 15, ಬಳ್ಳಾರಿ 14, ತುಮಕೂರು 11 ಹಾಗೂ ಚಾಮರಾಜ ನಗರಗಳಲ್ಲಿ 11 ಪ್ರಕರಣಗಳಿದ್ದು ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ ಒಂದಂಕಿಯಲ್ಲಿದೆ.