ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ವೇಗವಾಗಿ ಹರಡ್ತಾ ಇದೆ. ಇನ್ನು ಕೆಲವು ದೇಶಗಳಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ (WHO) ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ವೇಗವಾಗಿ ಹರಡುವ ರೂಪಾಂತರಿ ವೈರಸ್ ಗಳು ಬಂದಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದೆ. WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಕೋವಿಡ್ -19 ತೀವ್ರತೆ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ ಎಂದಿದ್ದಾರೆ. ಆದ್ರೆ ಈ ವರ್ಷ ಸಾಂಕ್ರಾಮಿಕ ರೋಗವು ಹೇಗೆಲ್ಲಾ ಬೆಳವಣಿಗೆಯಾಗಬಹುದು ಎಂಬುದಕ್ಕೆ ಮೂರು ಸಂಭಾವ್ಯ ಮಾರ್ಗಗಳನ್ನು ಮುಂದಿಟ್ಟಿದ್ದಾರೆ.
ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಕೋವಿಡ್ -19 ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳವಾಗಬಹುದು. ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ದುರ್ಬಲ ವರ್ಗದವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಅನ್ನೋದು ಅವರ ಅಭಿಪ್ರಾಯ.
ಅತಿ ಕಡಿಮೆ ಸಮಯದಲ್ಲಿ ಕೊರೊನಾ ಸೋಂಕು ತೀವ್ರ ಸ್ವರೂಪ ಪಡೆಯುವ ಆತಂಕವೂ ಇದೆ. ಹೆಚ್ಚು ಮಾರಣಾಂತಿಕ ಮತ್ತು ವೇಗವಾಗಿ ಹರಡುವ ಕೋವಿಡ್ ರೂಪಾಂತರಿಯು ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಎಲ್ಲರೂ ವ್ಯಾಕ್ಸಿನ್ ಪಡೆದಿದ್ದರೂ ಕಾಲಕ್ರಮೇಣ ಅದರ ಪ್ರಭಾವ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಕುಗ್ಗುತ್ತದೆ. ಹಾಗಾಗಿ ನಿರ್ಲಕ್ಷ ಬೇಡ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕಿವಿಮಾತು ಹೇಳಿದ್ದಾರೆ.
ಕೊರೊನಾವನ್ನು ಸಂಪೂರ್ಣ ತೊಡೆದು ಹಾಕುವುದು ಹೇಗೆ ಎಂಬ ಪ್ರಶ್ನೆಗೂ ಅವರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಪ್ರಪಂಚದಾದ್ಯಂತದ ಎಲ್ಲಾ ದೇಶಗಳು 5 ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ ಅಂತಾ ಹೇಳಿದ್ದಾರೆ.
1. ಕಣ್ಗಾವಲು, ಪ್ರಯೋಗಾಲಯಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ
2. ವ್ಯಾಕ್ಸಿನೇಷನ್, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳು
3. COVID-19ಗಾಗಿ ವೈದ್ಯಕೀಯ ಆರೈಕೆ ಮತ್ತು ಸೂಕ್ತವಾದ ಆರೋಗ್ಯ ವ್ಯವಸ್ಥೆ
4. ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು, ಅದಕ್ಕೆ ಬೇಕಾದ ಸಾಧನಗಳ ಪೂರೈಕೆ
5. ದೀರ್ಘಾವಧಿಯ ಉಸಿರಾಟದ ಕಾಯಿಲೆಯ ನಿರ್ವಹಣೆಗೆ ತುರ್ತು ಕ್ರಮ
ಓಮಿಕ್ರಾನ್ ಮತ್ತು ಡೆಲ್ಟಾದ ಮರುಸಂಯೋಜಕ ವೈರಸ್ ಡೆಲ್ಟಾಕ್ರಾನ್ ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಇದರ ಹೊರತಾಗಿ, ಓಮಿಕ್ರಾನ್‌ನ ಸಬ್‌ವೇರಿಯಂಟ್ BA.2 ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಹಾಗಾಗಿ ಕೊರೊನಾ ಸೋಂಕು ಹೆಚ್ಚಾಗುವ ಸಂಭವವೂ ಇದೆ.