ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಈ ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಅಲ್ಲದೆ ಹಾಸನ, ದಾವಣಗೆರೆ ಮತ್ತು ರಾಯಚೂರು ವಿಮಾನ ನಿಲ್ದಾಣ ಯೋಜನೆಗಳನ್ನು ಸಹ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಮತ್ತು ಮೈಸೂರಿನಲ್ಲಿ ವಿಮಾನ ನಿಲ್ದಾಣಗಳು ಈಗಾಗಲೇ ಕಾರ್ಯಾರಂಭ ನಡೆಸುತ್ತಿದ್ದು, ಬೀದರ್ – ಬೆಂಗಳೂರು ನಡುವೆ ಬುಧವಾರದಿಂದ ಸೇವೆ ಆರಂಭವಾಗಲಿದೆ. ಇನ್ನು ಶಿವಮೊಗ್ಗದಲ್ಲಿ ಈ ವರ್ಷಾಂತ್ಯಕ್ಕೆ ವಿಮಾನನಿಲ್ದಾಣ ಲೋಕಾರ್ಪಣೆಗೊಳ್ಳಲಿದ್ದು, ರಾಜ್ಯದಲ್ಲಿ ಆರಂಭವಾಗಿರುವ ಎಲ್ಲ ಯೋಜನೆಗಳು ಪೂರ್ಣಗೊಂಡರೆ ಒಟ್ಟು 11 ವಿಮಾನ ನಿಲ್ದಾಣಗಳನ್ನು ಹೊಂದಿದಂತಾಗುತ್ತದೆ. ಈ ಮೂಲಕ ಕರ್ನಾಟಕ ಅತಿ ಹೆಚ್ಚು ವಿಮಾನ ನಿಲ್ದಾಣಗಳು ಹೊಂದಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಸಚಿವ ಸೋಮಣ್ಣ ಹೇಳಿದರು.