ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ 34 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಕಿಡಿಕಾರಿರುವ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್, ಆ ಸಾವು ಅನ್ಯಾಯವಲ್ಲವೇ ? ಯಾರು ಅದಕ್ಕೆ ಹೊಣೆ ? ಎಂದು ಪ್ರಶ್ನಿಸಿದ್ದಾರೆ.
ಅಂದು ದುರಂತ ಸಂಭವಿಸಿದಾಗ ನಾನು ಹುಚ್ಚನಂತೆ ಅಳ್ತಾ ಇದ್ದೆ. ಎಷ್ಟೇ ಸಮಾಧಾನ ಮಾಡಿಕೊಂಡರೂ ನೋವು ಕಡಿಮೆಯಾಗಲ್ಲ. ತನಿಖೆಗೆ ಆಗ್ರಹಿಸಿದ ಮೇಲೆ ಪರಿಹಾರ ಕೊಟ್ಟಿದ್ದಾರೆ. ಆದರೆ ಪ್ರಯೋಜನವೇನು ? ಸಾವು – ನೋವಿಗೆ ಯಾರು ಜವಾಬ್ದಾರಿ ಎಂದು ಕೇಳಿದ್ದಾರೆ.
ಘಟನೆ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೆ. ಈ ವಯಸ್ಸಿನಲ್ಲಿ ನಾನು, ನೀವು ಬದುಕಬೇಕು ಎಂಬ ಆಸೆ ಇಟ್ಟುಕೊಂಡಿದ್ದೇವೆ. ಆದರೆ ಆ ದುರಂತದಲ್ಲಿ ಸಾವನ್ನಪ್ಪಿದ ಜನರಿಗೆ ಬದುಕ ಆಸೆ ಇರಲ್ವಾ ? ಎಂದು ಪ್ರಶ್ನಿಸಿದ್ದೆ. ಈ ಸಾವಿಗೆ ಯಾರು ಜವಾಬ್ದಾರಿ ಎಂದು ಕೇಳಿದ್ದೆ. ತನಿಖೆ ನಡೆಸಿ ಎಂದು ಆಗ್ರಹಿಸುತ್ತಿದ್ದಂತೆ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಚಾರವಾಗಿ, ಪೊಲೀಸ್ ಸಿಬ್ಬಂದಿಯನ್ನು ಬಯ್ಯಲು ನಾನು ಅವರ ಶತ್ರುನಾ ? ನನಗೊಂದು ಸಾಮಾನ್ಯರಿಗೊಂದು ನಿಯಮ ಏಕೆ ಎಂದು ಕೇಳಿದ್ದೆ. ಪೊಲೀಸರು ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸುತ್ತಿದ್ರು. ನನಗೆ ನೋಡಿಕೊಂಡು ಹೋಗುವಂತೆ ಹೇಳಿದರು ಅದಕ್ಕೆ ಯಾಕೆ ಹೀಗೆ ಮಾಡುತ್ತೀರಾ ? 24 ಕಡೆ ವಾಹನ ನಿಲ್ಲಿಸಿ, ಟೋಲ್ ರೀತಿ ಮಾಡಿದ್ರೆ ಹೇಗೆ ? ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಡವೇ ಎಂದು ಪ್ರಶ್ನಿಸಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.