ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತಾದರೂ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಗೊಂಡಾಗ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತವಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಎಚ್.ಡಿ. ಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ, ವರುಣಾ ಕ್ಷೇತ್ರದ ಜೊತೆಗೆ ಕೋಲಾರದಿಂದಲೂ ತಾವು ಕಣಕ್ಕಿಳಿಯುವುದಾಗಿ ಸಿದ್ದರಾಮಯ್ಯನವರು ಹೇಳಿದ್ದು, ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಸಹ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧೆಗೆ ಇಳಿಯುವುದು ನಿಶ್ಚಿತವಾಗಿದೆ. ಇದು ತಮ್ಮ ಕಡೆಯ ಚುನಾವಣೆ ಆಗಿರುವ ಕಾರಣ ಹುಟ್ಟೂರಿನಲ್ಲಿಯೇ ಚುನಾವಣೆ ಎದುರಿಸಬೇಕೆಂಬ ಕಾರ್ಯಕ್ಕೆ ವರುಣಾದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇನ್ನು ಕೋಲಾರದಿಂದಲೂ ಕಣಕ್ಕಿಳಿಯುವಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಒತ್ತಡ ತರುತ್ತಿದ್ದು, ಹೀಗಾಗಿ ಅಲ್ಲಿಂದಲೂ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಚಾಮುಂಡೇಶ್ವರಿಯಲ್ಲಿ ಪರಾಭವಗೊಂಡಿದ್ದರೆ ಬಾದಾಮಿಯಿಂದ ಗೆಲುವು ಸಾಧಿಸಿದ್ದರು.