ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಮತ್ತೆ ಕೊರೊನಾ ಕೇಸ್ ಗಳು ಹೆಚ್ಚಾಗ್ತಾ ಇರೋದು ತೀವ್ರ ಆತಂಕ ಮೂಡಿಸಿದೆ. ಭಾರತಕ್ಕೂ ನಾಲ್ಕನೇ ಅಲೆ ಅಪ್ಪಳಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಕೊರೊನಾ ಮತ್ತೆ ಆರ್ಭಟಿಸ್ತಾ ಇದೆ.
ಚೀನಾದಲ್ಲಿ 14 ತಿಂಗಳುಗಳ ನಂತರ ಇಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ. ಹಾಂಗ್ ಕಾಂಗ್ನಲ್ಲಿ ಈವರೆಗೆ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸುಮಾರು 5401 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ 2019ರಲ್ಲಿ ಚೀನಾದಲ್ಲಿ ಬಲಿಯಾದವರಿಗಿಂತಲೂ ಹೆಚ್ಚು.
ಚೀನಾದ ಬಳಿಕ ಅತಿ ಹೆಚ್ಚು ಕಳವಳಕ್ಕೆ ಕಾರಣವಾಗಿರೋ ದೇಶವೆಂದ್ರೆ ದಕ್ಷಿಣ ಕೊರಿಯಾ. ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90 ಲಕ್ಷದ ಗಡಿ ದಾಟಿದೆ. ಗುರುವಾರ ಮತ್ತು ಶನಿವಾರದ ನಡುವಣ ದಿನಗಳಲ್ಲಿ ಶೇ.16ರಷ್ಟು ಅಂದ್ರೆ 14 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಯುರೋಪ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಇಟಲಿಯಲ್ಲಿ ಒಂದೇ ವಾರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ.
ಕಳೆದ ವಾರಕ್ಕೆ ಹೋಲಿಸಿದ್ರೆ ಜಗತ್ತಿನಾದ್ಯಂತ ಒಟ್ಟಾರೆ ಕೇಸ್ ಗಳಲ್ಲೂ ಶೇ.12 ರಷ್ಟು ಏರಿಕೆಯಾಗಿರೋದು ನಿಜಕ್ಕೂ ಆತಂಕಕಾರಿ. ಕೊರೋನಾ ಅಂಕಿ-ಅಂಶಗಳಲ್ಲಿನ ಈ ಜಿಗಿತದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಈ ಸಾಂಕ್ರಾಮಿಕ ರೋಗವು ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ, ನಿರ್ಲಕ್ಷ್ಯ ಮತ್ತು ತಪ್ಪು ಮಾಹಿತಿಯೇ ಪ್ರಕರಣಗಳು ಮತ್ತೆ ಹೆಚ್ಚಾಗಲು ಮುಖ್ಯ ಕಾರಣ ಎಂದು WHO ಹೇಳಿದೆ. ಓಮಿಕ್ರಾನ್ ಅನ್ನು ಹಗುರಾಗಿ ಪರಿಗಣಿಸದಂತೆ ಎಚ್ಚರಿಸಿದೆ.
ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆಯದೇ ಇರುವುದು ಅತ್ಯಂತ ಅಪಾಯಕಾರಿಯೆಂದು ಅಭಿಪ್ರಾಯಪಟ್ಟಿದೆ. ಮಾರ್ಚ್ 27ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಪುನರಾರಂಭಗೊಳ್ಳಲಿದ್ದು, ಭಾರತದಲ್ಲೂ ನಾಲ್ಕನೇ ಅಲೆಯ ಭೀತಿ ಹೆಚ್ಚಿದೆ. ಆದ್ರೆ ಬಹುತೇಕರು ಈಗಾಗ್ಲೇ ಲಸಿಕೆ ಪಡೆದಿರುವುದರಿಂದ ಅಷ್ಟೇನೂ ಅಪಾಯವಿಲ್ಲ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ. ಹಾಗಂತ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಬೇಡ. ಜಾಗರೂಕರಾಗಿರುವುದು ಬಹು ಮುಖ್ಯ.