ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಮೊದಲ ಅಲೆ ವೇಳೆ ತಿಂಗಳಾನುಗಟ್ಟಲೆ ಲಾಕ್ಡೌನ್ ಹೇರಿದ್ದ ಪರಿಣಾಮ ಆರ್ಥಿಕವಾಗಿ ಜರ್ಜರಿತವಾಗಿದ್ದ ಜನತೆ ಎರಡನೇ ವೇಳೆ ಸಂಭವಿಸಿದ ಸಾವುಗಳಿಂದ ಆಪ್ತರನ್ನು ಕಳೆದುಕೊಂಡಿದ್ದರು.
ಇದೀಗ ಮೂರನೇ ಅಲೆಯೂ ಸಹ ಬಂದಿದ್ದು, ಆದರೆ ಇದರ ಪರಿಣಾಮ ಜನತೆ ಮೇಲೆ ಅಷ್ಟಾಗಿ ಆಗಿರಲಿಲ್ಲ. ಹೀಗಾಗಿ ಜನತೆ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮಾಸ್ಕ್ ಇಲ್ಲದೆ, ಸಾರ್ವಜನಿಕ ಅಂತರ ಕಾಪಾಡಿಕೊಳ್ಳದೆ ಎಗ್ಗಿಲ್ಲದೆ ಅಡ್ಡಾಡುತ್ತಿದ್ದಾರೆ. ಇದರ ಮಧ್ಯೆ ಈಗ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಯಲ್ಲಿ ಹೆಚ್ಚಳವಾಗುತ್ತಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಈ ಪ್ರಮಾಣ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.