ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ಪಾಟೀಲ್ ವಾಟ್ಸಾಪ್ ಸಂದೇಶದ ಮೂಲಕ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣ ಎಂದು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾವು ನಡೆಸಿದ ಕಾಮಗಾರಿಗಳ ಬಿಲ್ ಮಂಜೂರಾತಿಗೆ ಸಚಿವ ಈಶ್ವರಪ್ಪ ತಮ್ಮ ಆಪ್ತರ ಮೂಲಕ ಶೇಕಡಾ 40 ಕಮಿಷನ್ ಕೇಳಿರುವುದಾಗಿ ಸಂತೋಷ್ ಪಾಟೀಲ್ ಆರೋಪಿಸಿದ್ದರು. ಹೀಗಾಗಿ ಈಶ್ವರಪ್ಪನವರ ವಿರುದ್ಧ ಈಗ ಭ್ರಷ್ಟಾಚಾರ ಆರೋಪವೂ ಕೇಳಿಬರುತ್ತಿದೆ. ಆದರೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪನವರು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದರು.
ಇದರ ಮಧ್ಯೆ ಪ್ರತಿಪಕ್ಷ ಕಾಂಗ್ರೆಸ್ ಈಶ್ವರಪ್ಪನವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದೆ. ಅಲ್ಲದೆ ಈಶ್ವರಪ್ಪನವರನ್ನು ಕೂಡಲೇ ಬಂಧಿಸುವಂತೆ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ಪ್ರಕರಣವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಬಹುದು ಎಂಬ ಆತಂಕ ಬಿಜೆಪಿ ವಲಯವನ್ನು ಕಾಡುತ್ತಿದ್ದು, ಹೀಗಾಗಿ ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್ ನತ್ತ ನೆಟ್ಟಿದೆ.
ಪ್ರಕರಣದ ಸಂಪೂರ್ಣ ವರದಿಯನ್ನು ಬಿಜೆಪಿ ಕೇಂದ್ರ ನಾಯಕರು ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಅವರು ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.