ಶಿವಮೊಗ್ಗ: ಗುತ್ತಿಗೆದಾರರ ಬಳಿ ಹಲವರು ಪರ್ಸಂಟೇಜ್ ಪಡೆಯುತ್ತಿದ್ದಾರೆ. ಕಾಮಗಾರಿಗಳಿಗೆ ಮಂಜೂರಾಗುವ ಶೇ.65 ರಷ್ಟು ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಗುತ್ತಿಗೆದಾರರು ಯಾಕೆ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರೆಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಬಿಜೆಪಿ ಸರ್ಕಾರದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಅವಧಿಯಲ್ಲಿಯೂ ಈ ವ್ಯವಹಾರ ನಡೆದಿದೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೆ. ಆಗ ಸಿದ್ದರಾಮಯ್ಯನವರ 80 ಶಾಸಕರು ಮನೆಯಲ್ಲಿ ಮಲಗಿದ್ದರು. ಅವರಿಗೆಲ್ಲ ಈಗ ಪರ್ಸಂಟೇಜ್ ವಿರುದ್ಧ ಹೋರಾಟದ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಈಶ್ವರಪ್ಪ ವಿರುದ್ಧ ಆರೋಪಕ್ಕೆ ನಾನೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದೆ. ನಾನು ಬಿಜೆಪಿ ಪರ ಅಲ್ಲ ಅಥವಾ ಈಶ್ವರಪ್ಪ ನನಗೇನು ನೆಂಟರೂ ಅಲ್ಲ. ಸತ್ಯಾಸತ್ಯತೆ ಹೊರಗೆ ಬರುವ ದೃಷ್ಟಿಯಿಂದ ಈಶ್ವರಪ್ಪ ರಾಜೀನಾಮೆ ಅಗತ್ಯವಿತ್ತು. ಅವರ ಬಂಧನದ ಅಗತ್ಯವಿಲ್ಲ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಗರಣಗಳ ಸಂಸ್ಕೃತಿಯನ್ನು ಬಿಜೆಪಿ ಪ್ರಾರಂಭಿಸಿದೆ. ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.