ಕಾರವಾರ: ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ನಡೆಯುವ ಸುಳಿವು ನೀಡಿರುವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಸಿ.ಟಿ.ರವಿ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಗೋವಾದಲ್ಲಿ ಕಾಂಗ್ರೆಸ್ ನಿಂದ 12 ಶಾಸಕರು ಗೆದ್ದಿದ್ದರು. ಬಿಜೆಪಿಯಿದ 20 ಶಾಸಕರು ಆಯ್ಕೆಯಾಗಿದ್ದರು. ಪಕ್ಷೇತರ ಬೆಂಬಲ ಪಡೆದು ನಾವು ಸರ್ಕಾರ ರಚನೆ ಮಾಡಿದೆವು. ನಮ್ಮ ಪಕ್ಷ ಬಹುಮತದಲ್ಲಿದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಕಾಂಗ್ರೆಸ್ ಪಕ್ಷ ತೊರೆದು 8 ಶಾಸಕರು ಬಿಜೆಪಿಗೆ ಬಂದರು. ಅದು ಅಪರಾಧವಾಯ್ತಾ? ಹಾಗೆ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿರುವ ಕಾಂಗ್ರೆಸ್ ನವರು ನಮ್ಮ ಪಕ್ಷಕ್ಕೆ ಬರುವುದಾಗಿ ಹೇಳಿರಬಹುದು. ಚಿಂತೆ ಮಾಡಬೇಡ ಅಣ್ಣಾ ನೀವು ಕರೆದಾಗ ಬರುತ್ತೇವೆ ಎಂದಿರಬೇಕು. ಈಗ ಕಾಂಗ್ರೆಸ್ ನಲ್ಲಿ ಇದ್ದರೂ ಕೂಡ ಕರೆದಾಗ ಬಿಜೆಪಿಗೆ ಬರುತ್ತೇವೆ ಎಂದಿರಬಹುದು ಎಂದು ಹೇಳಿದ್ದಾರೆ.