ಡೇಟಾ ದುರುಪಯೋಗದ ಹಿನ್ನೆಲೆಯಲ್ಲಿ ಇ-ಫಾರ್ಮಸಿಗಳನ್ನು ಬಂದ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈ ಹಿಂದೆ ಆನ್‌ಲೈನ್ ಫಾರ್ಮಸಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಿತ್ತು.
ಪರವಾನಗಿ ಇಲ್ಲದೆ ಔಷಧಗಳನ್ನು ಮಾರಾಟ ಮಾಡಿದ್ದಕ್ಕಾಗಿ ಮತ್ತು ವಿತರಿಸಿದ್ದಕ್ಕಾಗಿ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿತ್ತು. 1940 ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್‌ಗೆ ವಿರುದ್ಧವಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ವ್ಯವಹಾರ ನಡೆಸುತ್ತಿವೆ ಎಂದು ನಿಯಂತ್ರಕರು ನೋಟಿಸ್‌ಗಳಲ್ಲಿ ತಿಳಿಸಿದ್ದಾರೆ.
ಟಾಟಾ 1mg, Amazon, Flipkart, NetMeds, MediBuddy, Practo, Frankross, ಅಪೋಲೋ ಸೇರಿದಂತೆ 20 ಕ್ಕೂ ಹೆಚ್ಚು ಇ-ಫಾರ್ಮಸಿಗಳಿಗೆ ಈ ಸಂಬಂಧ ನೋಟಿಸ್ ನೀಡಲಾಗಿದೆ. ನಿಯಮಾವಳಿಗಳ ಪ್ರಕಾರ, ತಯಾರಕರು ಮಾರಾಟ ಅಥವಾ ವಿತರಣೆಗಾಗಿ, ಸ್ಟಾಕ್ ಮಾಡಿಕೊಳ್ಳಲು ನಿಯಮಗಳನ್ನು ಅನುಸರಿಸಬೇಕು. ನಿಷೇಧಿಸಿರುವ ಔಷಧಗಳನ್ನು ಯಾವುದೇ ಕಾರಣಕ್ಕೂ ಮಾಡುವಂತಿಲ್ಲ. 1945ರ ನಿಯಮ 64ರಂತೆ ಮಾರಾಟ ಪರವಾನಗಿಯನ್ನು ನೀಡುವ ಮೊದಲು ಕೆಲವು ಷರತ್ತುಗಳನ್ನು ಪೂರೈಸಬೇಕು.
ನಿಯಮ 65ರ ಅಡಿಯಲ್ಲಿ ಪರವಾನಗಿದಾರರು ಅನುಸರಿಸಬೇಕಾದ ಪರವಾನಗಿಯ ಷರತ್ತುಗಳನ್ನು ಸೂಚಿಸಲಾಗಿದೆ. ಇದಲ್ಲದೆ ನಿಯಮ 62ರ ಪ್ರಕಾರ, ಔಷಧವನ್ನು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮಾರಾಟ ಮಾಡಲು ಅಥವಾ ದಾಸ್ತಾನು ಮಾಡಲು ಬಯಸಿದರೆ ಪರವಾನಗಿ ಪ್ರಾಧಿಕಾರಕ್ಕೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕು.
ಹೀಗಾಗಿ ಯಾವುದೇ ಔಷಧದ ಮಾರಾಟ, ದಾಸ್ತಾನು ಅಥವಾ ಪ್ರದರ್ಶನ, ವಿತರಣೆಗಾಗಿ ಸಂಬಂಧಪಟ್ಟ ರಾಜ್ಯ ಪರವಾನಗಿ ಪ್ರಾಧಿಕಾರದಿಂದ ಪರವಾನಗಿ ಪಡೆಯುವುದು ಅವಶ್ಯಕ. ಪರವಾನಗಿಯ ಷರತ್ತುಗಳನ್ನು ಪರವಾನಗಿದಾರರು ಅನುಸರಿಸಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಇ ಫಾರ್ಮಸಿಗಳನ್ನು ಮುಚ್ಚಲು ಕೇಂದ್ರ ಸರ್ಕಾ ಮುಂದಾಗಿದೆ.