ಭಾರತದಲ್ಲಿ ಇನ್‌ಫ್ಲೂಯೆಂಜಾ ಭೀತಿ ಆವರಿಸಿರುವಾಗಲೇ ಅತ್ತ ಇಸ್ರೇಲ್‌ನ ಆರೋಗ್ಯ ಸಚಿವಾಲಯವು ಕೋವಿಡ್ನ ಹೊಸ ರೂಪಾಂತರವೊಂದನ್ನು ಪತ್ತೆ ಮಾಡಿದೆ. ಇದು ಕೊರೊನಾ ವೈರಸ್‌ನ ಓಮಿಕ್ರಾನ್ ಆವೃತ್ತಿಯ ಎರಡು ಉಪ-ವ್ಯತ್ಯಯಗಳನ್ನು ಒಳಗೊಂಡಿದೆ. ಇದನ್ನು BA.1 ಮತ್ತು BA.2 ಎಂದು ಉಲ್ಲೇಖಿಸಲಾಗುತ್ತದೆ. ಇತ್ತೀಚೆಗೆ ಬೆನ್ ಗುರಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ವ್ಯಕ್ತಿಗಳಿಗೆ ನಡೆಸಲಾದ ಪಿಸಿಆರ್ ಪರೀಕ್ಷೆಯಲ್ಲಿ ಈ ರೂಪಾಂತರ ಪತ್ತೆಯಾಗಿದೆ.
ಇಸ್ರೇಲ್ ಆರೋಗ್ಯ ಸಚಿವಾಲಯದ ಪ್ರಕಾರ, ಕೋವಿಡ್ -19ನ ಈ ಹೊಸ ರೂಪಾಂತರವು ಪ್ರಸ್ತುತ ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣಿಸಿಕೊಂಡಿಲ್ಲ. ಇದುವರೆಗೆ ಪತ್ತೆಯಾದ ಈ ಸಂಯೋಜಿತ ಸ್ಟ್ರೈನ್‌ನ ಎರಡು ಪ್ರಕರಣಗಳು ಜ್ವರ, ತಲೆನೋವು ಮತ್ತು ಸ್ನಾಯು ನೋವಿನಂತಹ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಪ್ರದರ್ಶಿಸಿವೆ. ಆದ್ದರಿಂದ ಈ ಸೋಂಕಿಗೆ ತುತ್ತಾದವರಿಗೆ ಯಾವುದೇ ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿಲ್ಲ.
ಇಸ್ರೇಲ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ ಡಾ. ಶರೋನ್ ಅಲ್ರೋಯ್-ಪ್ರೀಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಂಯೋಜಿತ ಹೊಸ ರೂಪಾಂತರಿಗೆ ಬಗ್ಗೆ ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದಿದ್ದಾರೆ. ಇಸ್ರೇಲ್‌ನ 9.2 ಮಿಲಿಯನ್ ಜನಸಂಖ್ಯೆಯಲ್ಲಿ, ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಜನರು ಈಗಾಗಲೇ ಮೂರು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಇಲ್ಲಿಯವರೆಗೆ ಇಸ್ರೇಲ್‌ನಲ್ಲಿ ಸುಮಾರು 1.4 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಸುಮಾರು 8,244 ಸಾವು ಸಂಭವಿಸಿವೆ.
ಕೋವಿಡ್ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಲಸಿಕೆ ಪಡೆಯದ ಪ್ರವಾಸಿಗರಿಗೆ ಕೂಡ ದೇಶವನ್ನು ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಇಸ್ರೇಲ್‌ನ ಪ್ರಧಾನಿ ನಫ್ತಾಲಿ ಬೆನೆಟ್ ಕಳೆದ ತಿಂಗಳು ಘೋಷಿಸಿದ್ದರು. ಸದ್ಯ ಇಸ್ರೇಲ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಇಳಿಕೆಯಾಗಿದೆ. ಇಸ್ರೇಲ್ ಸರ್ಕಾರವು ಇತ್ತೀಚೆಗೆ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ, ಆರೋಗ್ಯ ಕಾರ್ಯಕರ್ತರೊಂದಿಗೆ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಅನ್ನು ನೀಡಲಾಗುವುದು ಎಂದು ಘೋಷಿಸಿದೆ.
ಡಿಸೆಂಬರ್ 2020ರಲ್ಲಿ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ ಮೊದಲ ದೇಶಗಳಲ್ಲಿ ಇಸ್ರೇಲ್ ಕೂಡ ಒಂದು. ಆದಾಗ್ಯೂ ಓಮಿಕ್ರಾನ್ ರೂಪಾಂತರದ ಕ್ಷಿಪ್ರ ಹರಡುವಿಕೆಯಿಂದಾಗಿ ನವೆಂಬರ್ 2021 ರಲ್ಲಿ ಇಸ್ರೇಲ್‌ನಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ದೇಶದ ಗಡಿಗಳನ್ನು ಪುನಃ ಮುಚ್ಚಬೇಕಾಗಿ ಬಂದಿತ್ತು.