ವಿಜಯಪುರ: ಮತದಾನದ ಪ್ರಕ್ರಿಯೆ ವೇಳೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಇವಿಎಂ, ವಿವಿ ಪ್ಯಾಟ್ ಮಷಿನ್ ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಗೆ ಸಂಬಂಧಿಸಿದಂತೆ 20-25 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಸಬಿನಾಳ ಗ್ರಾಮದಲ್ಲಿ ಸಧ್ಯ ಪರಿಸ್ಥಿತಿ ಶಾಂತವಾಗಿದ್ದು, ಮತದಾನ ಪ್ರಕ್ರಿಯೆ ಮುಂದುವರೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚುವರಿ ಇವಿಎಂ, ವಿವಿಪ್ಯಾಟ್ ಮಷಿನ್ ಗಳನ್ನು ಅಧಿಕಾರಿಗಳು ಕೊಂಡೊಯ್ಯುತ್ತಿದ್ದರು. ಈ ವೇಳೆ ಮತದಾನವನ್ನು ಅರ್ಧಕ್ಕೆ ಸ್ಥಗಿತಗೊಳಿಸುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ಕಾರನ್ನು ಪಲ್ಟಿ ಮಾಡಿ, ಇವಿಎಂ, ವಿವಿ ಪ್ಯಾಟ್ ಮಷಿನ್ ಗಳನ್ನು ಕಸಿದು ಅವುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.