ಬೆಂಗಳೂರು: ಪಿ ಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ನೋಟೀಸ್ ನೀಡಿರುವ ಸಿಐಡಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಇದು ಸರ್ಕಾರದ ಅಸಮರ್ಥತೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ನಾನು ಬಿಡುಗಡೆ ಮಾಡಿದ್ದ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನನಗೆ ನೋಟೀಸ್ ನೀಡಿ, ಪಿ ಎಸ್ ಐ ನೇಮಕಾತಿ ಅಕ್ರಮದ ಕುರಿತು ತಮ್ಮ ಬಳಿ ಇರುವ ದಾಖಲೆ, ಸಾಕ್ಷಾಧಾರಗಳನ್ನು ನೀಡಿ ತನಿಖೆಗೆ ಸಹಕರಿಸಿ ಎಂದು ಕೇಳಿದ್ದಾರೆ. ನೋಟೀಸ್ ನೀಡುವ ಮೊದಲು ಕಾಮನ್ ಸೆನ್ಸ್ ಯೂಸ್ ಮಾಡಿ ಎಂದು ಗುಡುಗಿದ್ದಾರೆ.
ʼಮೊಟ್ಟೆʼ ಸಿಪ್ಪೆ ಮಾತ್ರ ಎಸೆಯಲೇಬೇಡಿ
ಆರೋಪಿ ದಿವ್ಯಾ ಹಾಗರಗಿ ಮನೆಗೆ ಹೋಗಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನೋಟೀಸ್ ನೀಡಿ, ಅಧಿಕಾರಿಗಳಿಗೆ ನೋಟೀಸ್ ನೀಡಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ವೈರಲ್ ಆಗುತ್ತಿರುವ ಆಡಿಯೋ ಬಿಡುಗಡೆ ಮಾಡಿರುವ ನನಗೆ ನೋಟೀಸ್ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ನನ್ನ ಬಳಿ ಇರುವ ದಾಖಲೆಗಳು ಸರ್ಕಾರದ ಬಳಿಯೂ ಇವೆ. ಅಧಿಕಾರಿಗಳ ಬಳಿಯೂ ಇದೆ. ಕೇಸ್ ನ ಎಕ್ಸಿ ಕುಟೀವ್ ಮೊದಲು ಗೃಹ ಸಚಿವರಿಗೆ ನೋಟೀಸ್ ನೀಡಲಿ ಎಂದಿದ್ದಾರೆ.
ಇಷ್ಟಕ್ಕೂ ನಾನು ಈ ಕೇಸ್ ನ ಆರೋಪಿಯೂ ಅಲ್ಲ, ಸಾಕ್ಷಿಯೂ ಅಲ್ಲ. ದಾಖಲೆ ನೀಡುವಂತೆ ನನಗೇಕೆ ನೋಟೀಸ್ ನೀಡಿದ್ದೀರಿ? ಇದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ. ಹಗರಣದ ತನಿಖೆ ನಡೆಸಲು ನನ್ನ ಬಳಿ ದಾಖಲೆ ಕೇಳಲು ನಿಮ್ಮ ಬಳಿ ದಾಖಲೆಗಳು ಇಲ್ಲವೇ? ನಾನು ಹೊಸ ತನಿಖೆ ಮಾಡಿ ದಾಖಲೆ ಸೃಷ್ಟಿಸಿಲ್ಲ, ಸಾರ್ವಜನಿಕ ವಲಯದಲ್ಲಿನ ಮಾಹಿತಿಯನ್ನೇ ನೀಡಿದ್ದೇನೆ. ನಾನು ರಿಲೀಸ್ ಮಾಡಿದ ವಿಡಿಯೋ, ಆಡಿಯೋ ಅದಾಗಲೇ ಇತ್ತು. ವಿಡಿಯೋದ ಮಾಹಿತಿ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಪಿ ಎಸ್ ಐ ಅಕ್ರಮದ ಬಗ್ಗೆ ಹಿಂದೆಯೇ ದೂರುಗಳು ಬಂದಿಲ್ಲವೇ? ದಾಖಲೆಗಳು ಸಿಐಡಿ ಬಳಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಗುಪ್ತಚರ ಇಲಾಖೆಗೆ ಮಾಹಿತಿಯೇ ಇಲ್ಲವೇ? ಗುಪ್ತಚರ ಇಲಾಖೆ ಸಂಪೂರ್ಣ ಝೀರೋ ಆಗಿದೆ ಅವರು ಪತ್ರಿಕೆ ಓದಿ ಮಾಹಿತಿ ಕೊಡ್ತಿದ್ದಾರೆ. ಇಂಟಲಿಜನ್ಸ್ ಕತ್ತೆ ಕಾಯುತ್ತಿದೆಯೇ? ಕಡಲೆಪುರಿ ತಿಂತಿದೆಯಾ? ನಿಮ್ಮ ತನಿಖೆಗೆ ನಾನು ದಾಖಲೆ ಕೊಡಬೇಕು ಎನ್ನುವುದಾದರೆ ಇಂಟಲಿಜನ್ಸ್ ಮಾಡುತ್ತಿರುವ ಕೆಲಸವೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.