ಶಿವಮೊಗ್ಗ: ದೇಶದ ಇತಿಹಾಸ ಗೊತ್ತಿಲ್ಲದ ಕೆಲವು ಫುಡಾರಿಗಳು ವೀರ ಸಾವರ್ಕರ್ ಅವರಿಗೆ ಅಪಚಾರ ಮಾಡಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಗೃಹ ಸಚಿವರು ಕೂಡ ಶಿವಮೊಗ್ಗಕ್ಕೆ ಆಗಮಿಸಿ ಮಾಹಿತಿ ಪಡೆದು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಶಿವಮೊಗ್ಗ, ಮಂಗಳೂರಿನಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಮಲೆನಾಡು, ಕರಾವಳಿಯಲ್ಲಿ ಎಸ್.ಡಿ.ಪಿ.ಐ., ಪಿಎಫ್ಐ ಶಾಂತಿಗೆ ಭಂಗ ತರುತ್ತಿವೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರು ಮುಂದಾಗಿದ್ದು, ಕ್ರಮ ಕೈಗೊಂಡಿದ್ದಾರೆ ಎಂದರು.
ಪದೇ ಪದೇ ಘಟನೆ ಪುನರಾವರ್ತನೆ ಆಗುತ್ತಿರುವುದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಗೊತ್ತಾಗಿದೆ. ಪೊಲೀಸರು ಸಂದರ್ಭಾನುಸಾರ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ವೀರ ಸಾವರ್ಕರ್ ಅವರಿಗೆ ಪ್ರಶ್ನೆ ಮಾಡುತ್ತಿರುವ ಈ ಫುಡಾರಿಗಳಿಗೆ ಕಾಂಗ್ರೆಸ್ ಬೆಂಬಲವೂ ಇದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ರೀತಿಯ ವರ್ತನೆ ಯಾರಿಗೂ ಶೋಭೆ ತರುವುದಿಲ್ಲ. ಈ ರೀತಿ ಅಶಾಂತಿ ಮೂಡಿಸಿದವರ ಮೇಲೆ ಕೂಡ ಪರಿಣಾಮ ಬೀರುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೊನ್ನೆ ಮೊನ್ನೆವರೆಗೂ ಕ್ರಿಕೆಟ್ ಆಡುತ್ತಿದ್ದವರು ಚಾಕು, ಚೂರಿ ಹಿಡಿದುಕೊಂಡಿದ್ದಾರೆಂದರೆ ಇವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಬಿಜೆಪಿ ನಾಯಕರು ಮತ್ತು ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಇರಿತಕ್ಕೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಅವರನ್ನು ಭೇಟಿಯಾದ ವಿಜಯೇಂದ್ರ ಆರೋಗ್ಯ ವಿಚಾರಿಸಿದರು. ಅವರ ಆರೋಗ್ಯ ಸ್ಥಿರವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕನಿಷ್ಟ 20 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಎಂದರು.