ಇರಾನ್‌ನಲ್ಲಿ ಹಿಜಾಬ್ ವಿರೋಧಿ ಹೋರಾಟ ನಡೀತಾ ಇದ್ರೆ ಕರ್ನಾಟಕದಲ್ಲಿ ಶಾಲೆಗಳಲ್ಲೂ ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಕಾನೂನು ಹೋರಾಟ ನಡೀತಿದೆ. ಈ ಮಧ್ಯೆ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿಗೆ ಕೇರಳದ ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಎಲ್ಲರೂ ಒಟ್ಟಾಗಿ ಹಿಜಾಬ್ ಅನ್ನು ಸುಟ್ಟು ಹಾಕುವ ಮೂಲಕ ಇರಾನ್ ಚಳವಳಿಗೆ ಸಾಥ್ ಕೊಟ್ಟಿದ್ದಾರೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ಘಟನೆ ನಡೆದಿದೆ.
ಮುಂದಿನ ತಿಂಗಳು ಮಲಪ್ಪುರಂನಲ್ಲಿ ಮತ್ತೊಂದು ಸೆಮಿನಾರ್ ಆಯೋಜನೆ ಮಾಡಲಾಗಿದೆ. ಅದಕ್ಕೂ ಮುನ್ನ ” Fanos-Science and Free thinking” ಎಂಬ ವಿಷಯದ ಮೇಲೆ ಕೋಝಿಕೋಡ್‌ನಲ್ಲಿ ಸೆಮಿನಾರ್ ನಡೆಸಲಾಯ್ತು. ಕಾರ್ಯಕ್ರಮದ ಭಾಗವಾಗಿ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಚಳವಳಿ ಬೆಂಬಲಿಸಿ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಸುಟ್ಟು ಹಾಕಿದರು.
ಸಂಘಟನೆಯ ಆರು ಮುಸ್ಲಿಂ ಮಹಿಳೆಯರು ಹಿಜಾಬ್‌ಗಳನ್ನು ಸುಡುವ ಕಾರ್ಯದ ನೇತೃತ್ವ ವಹಿಸಿದ್ದರು. ಇದು ಭಾರತದಲ್ಲಿ ನಡೆದ ಹಿಜಾಬ್ ದಹನದ ಮೊದಲ ಘಟನೆ. ಇರಾನ್‌ನಲ್ಲಿ ಹಿಜಾಬ್ ಜಾರಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಬೆಂಬಲಿಸಿ ಕಾರ್ಯಕರ್ತೆಯರು ಘೋಷಣೆಗಳನ್ನು ಮೊಳಗಿಸಿದ್ರು. ಫಲಕಗಳನ್ನು ಪ್ರದರ್ಶಿಸಿದರು.
ಯುಕ್ತಿವಾದಿ ಸಂಗಮ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಮುಕ್ತ ಚಿಂತನೆ ವಿಷಯದ ಕುರಿತು ಪ್ರತಿ ವರ್ಷ ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತದೆ. ಸಂಘಟನೆಯ ಭಾಗವಾಗಿರುವ ಮುಸ್ಲಿಂ ಮಹಿಳೆಯರು ಸೇರಿದಂತೆ ನಾನಾ ಧರ್ಮದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇರಾನ್‌ನಲ್ಲಿ ಕೂಡ ಹೋರಾಟದ ಭಾಗವಾಗಿ ಹಿಜಾಬ್ ದಹನ ನಡೆದಿತ್ತು. ಅದೇ ರೀತಿಯ ಘಟನೆ ಕೋಝಿಕೋಡ್‌ನಲ್ಲೂ ವರದಿಯಾಗಿದೆ.