ಬೆಂಗಳೂರು: ಡ್ರಂಕ್ & ಡ್ರೈವ್ ತಪಾಸಣೆಗೆ ಪೊಲೀಸ್ ಇಲಾಖೆ ಹೊಸ ಕ್ರಮ ಜಾರಿಗೆ ತಂದಿದೆ. ಇನ್ಮುಂದೆ ಮೇಲಧಿಕಾರಿಗಳು ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ನಡೆಸಬೇಕು.
ಎಎಸ್ಐ ಹಾಗೂ ಕಾನ್ಸ್ ಟೇಬಲ್ ಗಳು ಡ್ರಂಕ್ & ಡ್ರೈವ್ ತಪಾಸಣೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೊಸ ನಿಯಮ ಜಾರಿ ಮಾಡಿದೆ.
ಇನ್ಮುಂದೆ ಇನ್ಸ್ ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳು ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ಮಾಡಬೇಕು. ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ.
ಇದರಿಂದಾಗಿ ಎಎಸ್ಐ ಹಾಗೂ ಕಾನ್ಸ್ ಟೇಬಲ್ ಹೆಸರಲ್ಲಿ ನಡೆಯುತ್ತಿದ್ದ ಸುಲಿಗೆ ನಿಲ್ಲಲಿದೆ ಎಂಬುದು ಇಲಾಖೆಯ ಅಭಿಮತ. ಅಲ್ಲದೇ ವಾರದಲ್ಲಿ 2 ದಿನ ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ಮಾಡುವಂತೆ ಸಂಚಾರಿ ಪೊಲೀಸರ ಸಭೆಯಲ್ಲಿ ಸೂಚಿಸಲಾಗಿದೆ.