ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಐತಿಹಾಸಿಕ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ತಂಡದವರಿಗೆ ಅಭಿನಂದನೆಗಳು ಎಂದರು.
ಇದು ಎಲ್ಲಾ ವರ್ಗಗಳ ಜನರ ಕನಸು ಸಾಕಾರಗೊಳಿಸುವ ಬಜೆಟ್. ಕೇಂದ್ರದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಯಾಗಲಿದೆ. ಇದರಿಂದ ವಿಶ್ವಕರ್ಮ ಸಮುದಾಯದ ಜನರ ಜೀವನದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದರು.
ಮಧ್ಯಮವರ್ಗದವರ ಆಸೆ, ಆಕಾಂಕ್ಷೆ ಪೂರ್ಣಗೊಳಿಸುವ ಬಜೆಟ್ ಇದಾಗಿದ್ದು, ವಂಚಿತ ಸಮುದಾಯಗಳಿಗೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರಿಗಾಗಿ ವಿಶೇಷ ಉಳಿತಾಯ ಠೇವಣಿ ಯೋಜನೆ ಜಾರಿಯಾಗಿದೆ. ವಿಕಸಿತ ಭಾರತದ ಕನಸು ಸಂಪೂರ್ಣ ನನಸಾಗಲಿದೆ ಎಂದು ಹೇಳಿದ್ದಾರೆ.