ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ಮೊದಲ ಬಾರಿಗೆ ತನ್ನ ಸಿಬ್ಬಂದಿಗಳಿಗೆ 50 ಲಕ್ಷ ರೂಪಾಯಿ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೊಳಿಸಿದ್ದು, ಇಂದು ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಯೋಜನೆ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆ ಹೊಂದಿರುವ ನಿಗಮದ ನೌಕರರಿಗೆ ಪ್ರೀಮಿಯಂ ರಹಿತ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ದೊರೆಯಲಿದೆ.
ಈ ವಿಮಾ ಯೋಜನೆ ಅನ್ವಯ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟ ವೇಳೆ ಅವರ ಅವಲಂಬಿತರಿಗೆ 50 ಲಕ್ಷ ರೂಪಾಯಿಗಳ ಪರಿಹಾರದ ಹಣ ತಕ್ಷಣ ಸಿಗಲಿದೆ.
ಒಂದು ವೇಳೆ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದ ವೇಳೆ 20 ಲಕ್ಷ ರೂಪಾಯಿಗಳು ಹಾಗೂ ಶಾಶ್ವತ ಭಾಗಶಃ ಅಂಗವಿಕಲತೆ ಉಂಟಾದ ವೇಳೆ 10 ಲಕ್ಷ ರೂಪಾಯಿಗಳ ವಿಮಾ ಪರಿಹಾರ ದೊರೆಯಲಿದೆ.
ಈ ವಿಮಾ ಯೋಜನೆಯ ಮತ್ತೊಂದು ಮಹತ್ವದ ಸಂಗತಿ ಎಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭದಲ್ಲಿ ಆಗುವ ವೈಯಕ್ತಿಕ ಅಪಘಾತಗಳಿಗೂ ಇದು ಅನ್ವಯಿಸುತ್ತದೆ.
ಅಪಘಾತಕ್ಕೊಳಗಾದ ಸಿಬ್ಬಂದಿಯ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಠ 10 ಲಕ್ಷ ರೂಪಾಯಿ, ಔಷಧಿಗಳ ಅಮದಿಗಾಗಿ ಗರಿಷ್ಠ 5 ಲಕ್ಷ ರೂಪಾಯಿ, ಕೋಮಾದಲ್ಲಿ ಮೃತಪಟ್ಟರೆ 50 ಲಕ್ಷ ರೂಪಾಯಿಗಳ ಜೊತೆಗೆ ಹೆಚ್ಚುವರಿಯಾಗಿ 2 ಲಕ್ಷ ರೂಪಾಯಿ ಹಾಗೂ ಏರ್ ಅಂಬುಲೆನ್ಸ್ ಸೇವೆಗೆ 10 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡಲಾಗುತ್ತದೆ.
ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟ ವೇಳೆ ಅವರ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಠ 5 ಲಕ್ಷ ರೂಪಾಯಿ ಹಾಗೂ ಹೆಣ್ಣು ಮಕ್ಕಳ ವಿವಾಹಕ್ಕೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆ ಒಳಗೊಂಡಿರುತ್ತದೆ.