ಬೆಂಗಳೂರು: ಪೇಸಿಎಂ ಅಭಿಯಾನ ನಡೆಸಿದ್ದ ಕಾಂಗ್ರೆಸ್ ವಿರುದ್ಧ ಡರ್ಟಿ ಪಾಲಿಟಿಕ್ಸ್ ಎಂದು ಕಿಡಿಕಾರಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಿದೆ. ಡರ್ಟಿ ಪಾಲಿಟಿಕ್ಸ್ ಯಾರದ್ದು, ಆತ್ಮಾವಲೋಕ ಮಾಡಿಕೊಳ್ಳಿ ಸಿಎಂ ಬೊಮ್ಮಾಯಿಯವರೇ ಎಂದು ಹೇಳಿದೆ.
ಪಕ್ಷಕ್ಕೆ ಹಗಲಿರುಳು ದುಡಿದ ಲಿಂಗಾಯತ ಸಮುದಾಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾರಣವನ್ನೇ ಹೇಳದೆ, ಸರ್ಕಾರದ 2ನೇ ವರ್ಷದ ಸಂಭ್ರಮದಲ್ಲೇ ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿದ್ದು, ಬಿಜೆಪಿಯ ಉನ್ನತ ನಾಯಕನನ್ನು ಮೂಲೆಗುಂಪು ಮಾಡಿದ್ದು ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಎಂದು ಪ್ರಶ್ನಿಸಿದೆ.
ರಾಜಕೀಯ ಹಿತಾಸಕ್ತಿಗೊಸ್ಕರ ಹಿಜಾಬ್ ಹೆಸರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಕಿತ್ತುಕೊಂಡಿದ್ದು ಸಿಎಂ ಹುದ್ದೆಯ ಜವಾಬ್ದಾರಿ ಮರೆತು ಆಕ್ಷನ್‌ಗೆ ರಿಯಕ್ಷನ್ ಸಹಜ ಎನ್ನುವ ಮೂಲಕ ಸಮಾಜಘಾತುಕರಿಗೆ ಬೆಂಬಲಿಸಿದ್ದು ಕೋಮು ಕಲಹಗಳನ್ನು ಹಬ್ಬಿಸಿ ಕಣ್ಮುಚ್ಚಿ ಕುಳಿತಿದ್ದು ಇದು ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಅಲ್ಲವೇ?
ತಮ್ಮ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಜನಮಾನಸದಿಂದ ಮರೆಮಾಚಲು ವಾರಕ್ಕೊಂದು ಕೋಮು ವಿವಾದ ಸೃಷ್ಟಿಸಿ ಸಮಾಜವನ್ನು ಒಡೆದಿದ್ದು. ಪ್ರಜಾಪ್ರಭುತ್ವ ಹಾಗೂ ಸಂವಿಧಾನಗಳ ಆಶಯಕ್ಕೆ ವಿರುದ್ಧವಾದ ಶಕ್ತಿಗಳಿಗೆ ‘ಮೌನ’ದಿಂದ ಬೆಂಬಲಿಸಿದ್ದು ಬಿಜೆಪಿ ಡರ್ಟಿ ಪಾಲಿಟಿಕ್ಸ್ ಅಲ್ಲವೇ? ಯಾರದ್ದು ಡರ್ಟಿ ಪಾಲಿಟಿಕ್ಸ್? ಸಿಎಂ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.