ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮೋತ್ಸವ ಸಮಿತಿ ಬಗ್ಗೆ ವ್ಯಂಗ್ಯವಾಡಿರುವ ರಾಜ್ಯ ಬಿಜೆಪಿ ಘಟಕ ಇದು ಸಿದ್ದರಾಮೋತ್ಸವ ಸಮಿತಿಯೇ ಅಥವಾ ಕಾಂಗ್ರೆಸ್ ಬಂಡಾಯ ನಾಯಕರ ಪಟ್ಟಿಯೇ? ಎಂದು ಪ್ರಶ್ನಿಸಿದೆ.
ಸಿದ್ದರಾಮೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷರು ಸೇರಿ 62 ಸದಸ್ಯರಿದ್ದಾರೆ. ಇದೇನು ಕರ್ನಾಟದ #G23 ನಾಯಕರ ಪಟ್ಟಿಯೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ನೇರಾನೇರ ಬೆದರಿಸಲು ಗುಂಪು ಕಟ್ಟಿಕೊಂಡಂತಿದೆ! ಎಂದು ಸರಣಿ ಟ್ವೀಟ್ ಮೂಲಕ ಅಣಕವಾಡಿದೆ.
ಸಿದ್ದರಾಮೋತ್ಸವ ಸಮಿತಿ ಪಟ್ಟಿಯನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಬಿಜೆಪಿ, ಇದೇನು ಸಿದ್ದರಾಮೋತ್ಸವ ಸಮಿತಿಯೋ ಅಥವಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯೋ? ಬಹುಶಃ ಇದು ಬಂಡಾಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಇದೇ ವೇಳೆ ಬಾದಾಮಿ ಕ್ಷೇತ್ರಕ್ಕೆ ಓಡಾಡುವುದು ಸಿದ್ದರಾಮಯ್ಯ ಅವರಿಗೆ ಕಷ್ಟವಾಗುತ್ತದೆಯಂತೆ! ಹಾಗಾಗಿ ಕೋಲಾರಕ್ಕೆ ಬನ್ನಿ ಎಂಬುದು ರಮೇಶ್ ಕುಮಾರ್ ಬಳಗದ ಆಗ್ರಹವಂತೆ! ನಿದ್ದೆ ಮಾಡುವವನಿಗೆ ಹಾಸಿಗೆ ನೀಡಿದ ಹಾಗಿದೆ ಆಹ್ವಾನಗಳು! ಸಿದ್ದುಹಾಸ್ಯೋತ್ಸವ ಎಂದು ಲೇವಡಿ ಮಾಡಿದೆ.