ಬೆಂಗಳೂರು: ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಜಾರಿ ಕುರಿತು ಇಂದು ಶಿಕ್ಷಣ ಇಲಾಖೆ ವತಿಯಿಂದ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಶಿಕ್ಷಣ ತಜ್ಞರು, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ಸಭೆಯಲ್ಲಿ ಆದಿಚುಂಚನಗಿರಿಮಠ, ಕನಕಪೀಠ, ಮಾದಿಗಚೆನ್ನಯ್ಯ ಸ್ವಾಮೀಜಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ ತಜ್ಞರು, ರವಿಶಂಕರ್ ಗುರೂಜಿ, ಕ್ರೈಸ್ತ, ಮುಸ್ಲಿಂ ಧರ್ಮಗುರುಗಳು ಮೊದಲಾದವರು ಭಾಗಿಯಾಗಲಿದ್ದಾರೆ. ಇದು ಯಾವುದೇ ಧರ್ಮಕ್ಕೆ ಸೀಮಿತವಾದ ಸಭೆಯಲ್ಲ. ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನವಾಗಿದೆ ಎಂದು ಹೇಳಿದರು.
ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದಲ್ಲಿ ಮೌಲ್ಯಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನವಾಗಬೇಕು. ಸರ್ವಧರ್ಮದ ಮುಖಂಡರು ಸಮಾಜದ ಅಭಿವೃದ್ಧಿಗೆ ಸಹಾಯಕವಾಗಲಿದ್ದಾರೆ. ಹಾಗಾಗಿ ಇಂದಿನ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಮಹತ್ವದ್ದಾಗಿರುತ್ತದೆ ಎಂದರು.