ಬೆಂಗಳೂರು: ಕಾಂಗ್ರೆಸ್ ನಾಯಕರ ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೆ ಲೇವಡಿ ಮಾಡಿದ್ದು, ಇದು ಭಾರತ್ ಜೋಡೊ ಅಲ್ಲ, ಕಾಂಗ್ರೆಸ್ಸಿಗರು ಭಾರತ ಬಿಟ್ಟು ಓಡೋ ಯಾತ್ರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದರು. ಕಾಂಗ್ರೆಸ್ ನಾಯಕತ್ವದ ವಿರುದ್ಧ ಕೋಪದಿಂದ ಇರುವ ನಾಯಕರು ಜೊತೆಗೂಡಿ ಜಿ-23 ಗುಂಪು ರಚಿಸಿದ್ದರು. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುಇತ್ವ ಇಲ್ಲ. ಪಕ್ಷ ಚೇತರಿಸಿಕೊಳ್ಳಲಾರದು ಎಂಬುದನ್ನು ಅರಿತು ನಾಯಕರು ಒಬ್ಬೊಬ್ಬರಾಗಿ ಪಕ್ಷಕ್ಕೆ ವಿದಾಯ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿ ತಮ್ಮ ಮುತ್ತಾತ ನೆಹರು ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ. ಇದು ಜಾಣಮರೆವಲ್ಲದೇ ಇನ್ನೇನು ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಸಿಎಂ ಕುರ್ಚಿ ಹಗಲುಗನಸು ಕಾಣುತ್ತಿರುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ ಮತ್ತೊಂದೆಡೆ ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಹಗಲಿರುಳೂ ಸಿಎಂ ಕುರ್ಚಿಯ ತಿರುಕನ ಕನಸು ಕಾಣುವ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿರ್ದೇಶನ ಎಂದು ವಾಗ್ದಾಳಿ ನಡೆಸಿದ್ದಾರೆ.