ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಸಚಿವ ಆರ್.ಅಶೋಕ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜಕೀಯ ಎನ್ನುವುದು ಫುಟ್ಬಾಲ್ ಅಲ್ಲ, ಚೆಸ್ ಗೇಮ್ ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರ್. ಅಶೋಕ್ ಈ ಬಾರಿ ಪದ್ಮನಾಭನಗರದಿಂದಲೂ ಸೋಲುತ್ತಾರೆ. ಕನಕಪುರದಿಂದಲೂ ಸೋಲುತ್ತಾರೆ. ರಾಜಕೀಯ ಎನ್ನುವುದು ಚೆಸ್ ಗೇಮ್ ಇದ್ದಂತೆ ಎಂದರು.
ಆಟ ಆಡ್ತಿದ್ದಾರೆ, ಆಡಲಿ ಬಿಡಿ. ನನಗೆ ಹೋರಾಟ ಹೊಸದೇನೂ ಅಲ್ಲ, ಇಡೀ ಜೀವನ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಯಾರ ಹತ್ತಿರವೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಪದ್ಮನಾಭನಗರದಿಂದ ಡಿ.ಕೆ.ಸುರೇಶ್ ಸ್ಪರ್ಧೆಗೆ ಒತ್ತಡವಿದೆ. ಆದರೆ ಈಗಾಗಲೇ ಪದ್ಮನಾಭನಗರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ರಘುನಾಥ್ ನಾಯ್ಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.