ಮೈಸೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್ ಜಟಾಪಟಿ ಮುಂದುವರೆದಿದೆ. ಈ ದೇಶ ನಮ್ಮ ತಾತಂದೆ, ತನ್ವೀರ್ ಸೇಠ್ ತಾತ ಕೂಡ ಹಿಂದೂ ಆಗಿದ್ದರು ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಈ ದೇಶ ನಮ್ಮ ತಾತಂದೆ ದೇಶ. ಅದರಲ್ಲಿ ಯಾವ ಅನುಮಾನ ಬೇಡ. ತನ್ವೀರ್ ಸೇಠ್ ಪೂರ್ವಜರು ಕೂಡ ಹಿಂದುಗಳೇ. ಕನ್ವರ್ಟ್ ಆಗಿ ಅವರು ಮುಸ್ಲೀಂ ಆಗಿದ್ದಾರೆ ಅಷ್ಟೆ. ತನ್ವೀರ್ ಸೇಠ್ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದಿಲ್ಲ, ಅವರು ಕೂಡ ಇಲ್ಲಿಯೇ ಹುಟ್ಟಿ ಬೆಳೆದವರು. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡರು. ಯಾರೂ ಮೆಕ್ಕಾ, ಮದೀನ, ರೋಮ್, ಬೆತ್ಲಹೇಮ್ ನಿಂದ ಬಂದವರಲ್ಲ, ಇದನ್ನು ತನ್ವೀರ್ ಸೇಠ್ ಅರ್ಥಮಾಡಿಕೊಂಡರೆ ಸಾಕು ಎಂದಿದ್ದಾರೆ.
ಹಿಜಾಬ್ ಧರಿಸಿ ಶಾಲೆಗೆ ಬರಲು ಅವಕಾಶ ಬೇಕು ಎನ್ನುವುದಾದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ನಿನ್ನೆ ಕಿಡಿಕಾರಿದ್ದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದ ಶಾಸಕ ತನ್ವೀರ್ ಸೇಠ್, ಬೇರೆ ದೇಶಕ್ಕೆ ಹೋಗಿ ಎಂದು ವೀಸಾ ಕೊಡಲು ಇವರು ಯಾರು? ಈ ದೇಶ ಏನು ಇವರ ತಾತಂದಾ? ನಾವು ಕೂಡ ಇದೇ ದೇಶದಲ್ಲಿ ಹುಟ್ಟಿ ಬೆಳೆದವರು, ಇಲ್ಲಿನ ಪ್ರಜಾಪ್ರಭುತ್ವ, ನಾಗರೀಕತೆಯನ್ನು ನಂಬಿ ಇರುವವರು ಎಂದು ಗುಡುಗಿದ್ದರು.
ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಇದೀಗ ಈ ದೇಶ ನಮ್ಮ ತಾತಂದೆ. ತನ್ವೀರ್ ಸೇಠ್ ತಾತ ಕೂಡ ಹಿಂದುವಾಗಿದ್ದರು ಎಂದಿದ್ದಾರೆ. ಪ್ರತಾಪ್ ಸಿಂಹ ಹೇಳಿಕೆಗೆ ಮತ್ತೆ ತಿರುಗೇಟು ನೀಡಿರುವ ತನ್ವೀರ್ ಸೇಠ್, ಸಂಸದರು ಯಾವ ಅರ್ಥದಲ್ಲಿ ಹೀಗೆ ಹೇಳುತ್ತಿದ್ದಾರೆ ಗೊತ್ತಿಲ್ಲ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು. ಸಂಸದರು ಏನು ಹೇಳುತ್ತಿದ್ದಾರೆ ಎಂಬುದು ಅವರೇ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.