ಬೆಂಗಳೂರು: ಸಿದ್ದರಾಮಯ್ಯನವರೇ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಬಹಿರಂಗವಾಗಿ ಹಲವು ಬಾರಿ ಹೇಳಿಕೆ ನೀಡುತ್ತಿರುವ ಶಾಸಕ ಜಮೀರ್ ಅಹ್ಮದ್ ಅವರಿಗೆ ಎಐಸಿಸಿ ನೋಟೀಸ್ ನೀಡಿದ್ದು, ಪಕ್ಷದ ಲಕ್ಷ್ಮಣ ರೇಖೆ ದಾಟದಂತೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಜಮೀರ್ ಅಹ್ಮದ್ ಅವರಿಗೆ ಎಐಸಿಸಿ ನೀಡಿರುವ ನೋಟೀಸ್ ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೆ ಎಐಸಿಸಿಯ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೀಡಿರುವ ನೋಟೀಸ್ ಗೆ ಪ್ರತಿಕ್ರಿಯಿಸಿರುವ ಸಚಿವ ಸುನೀಲ್ ಕುಮಾರ್, ಇದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ನೀಡಿದ ನೋಟೀಸ್ ಎಂದು ಹೇಳಿದ್ದಾರೆ.
ಜಮೀರ್ ಅಹ್ಮದ್ ಬಾಯಲ್ಲಿ ಸಿದ್ದರಾಮಯ್ಯ ಮತ್ತೆ ತಾನೇ ಸಿಎಂ ಆಗಬೇಕು ಎಂದು ಹೇಳಿಸಿದ್ದಾರೆ. ಹಾಗಾಗಿ ಇದು ಜಮೀರ್ ಗೆ ಬಂದ ನೋಟೀಸ್ ಅಲ್ಲ. ಜಮೀರ್ ಮೂಲಕ ಸಿದ್ದರಾಮಯ್ಯನವರಿಗೆ ನೋಟೀಸ್ ಕೊಡಲಾಗಿದೆ ಎಂದು ಟೀಕಿಸಿದ್ದಾರೆ.