ಮಂಗಳೂರು: ಸಂವಿಧಾನಾತ್ಮಕವಾಗಿ ಎಲ್ಲಾ ಇಲಾಖೆಗಳಲ್ಲೂ ಪ್ರತಿ ನಾಗರಿಕನಿಗೂ ಅವನ ಧರ್ಮದ ಅನುಷ್ಠಾನದ ಹಕ್ಕಿದೆ. ಹತ್ತಾರು ವರ್ಷಗಳಿಂದ ಎಲ್ಲಾ ಇಲಾಖೆಗಳಲ್ಲಿಯೂ ಧಾರ್ಮಿಕ ಆಧಾರದಲ್ಲಿ ಪೂಜೆಗಳು ನಡೆಯುತ್ತಿದೆ. ಇಂದು ಕಾಂಗ್ರೆಸ್ ಅದನ್ನು ತಡೆಯುವ ಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ? ಎಂಬ ಡಿ.ಕೆ. ಶಿವಕುಮಾರ್ ಎಚ್ಚರಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ನ ಹೀನ ರಾಜಕಾರಣ ಹಾಗೂ ಸಿದ್ದರಾಮಯ್ಯನವರ ಮಾನಸಿಕತೆ ಬಯಲಾಗಿದೆ. ಒಬ್ಬ ಮುಖ್ಯಮಂತ್ರಿ, ಡಿಸಿಎಂ ಸಂವಿಧಾನಿಕವಾಗಿ ಆತನ ಧಾರ್ಮಿಕ ಆಚರಣೆಗೆ ಅಡ್ಡಿಬರುವುದು ಸರಿಯಲ್ಲ ಎಂದರು.
ಹಿಂದಿನಿಂದ ನಡೆದುಕೊಂಡು ಬಂದಿರುವ ಪೂಜೆಗಳನ್ನು ಕೆಲವು ಇಲಾಖೆಗಳಲ್ಲಿ ಮಾಡುತ್ತಾರೆ. ಇಂಥಹ ಪೂಜೆ ಮಾಡುವ ಪೊಲೀಸರನ್ನು ಒಂದು ಪಕ್ಷಕ್ಕೆ ಸೀಮಿತ ಮಾಡುವ ಹೀನ ರಾಜಕಾರಣ ಕಾಂಗ್ರೆಸ್ ನಿಂದ ಆಗುತ್ತಿದೆ. ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಬಜರಂಗದಳ ನಿಷೇಧವನ್ನು ಉಲ್ಲೇಖ ಮಾಡ್ತಾರೆ. ಇದು ಕಾಂಗ್ರೆಸ್, ಹಿಂದೂ ಸಮಾಜದ ಮೇಲೆ ಹೇಗೆ ಸವಾರಿ ಮಾಡುತ್ತೆ ಅನ್ನೋದನ್ನು ತೋರಿಸಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.