ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದು ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ನಡೆಸುತ್ತಿರುವ ಕುತಂತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಮನಗರದ ಎಲ್ಲಾ ಪ್ರವಾಸಿತಾಣಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೋಟೆಲ್ ಗಳನ್ನು ಬಂದ್ ಮಾಡಲು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಸಂಗಮ, ಮೇಕೆದಾಟು, ಸಾವನದುರ್ಗ ಎಲ್ಲೆಡೆಗಳಲ್ಲಿ ನಿರ್ಬಂಧ ಹೇರಲಾಗಿದೆ. ಒಮಿಕ್ರಾನ್ ಆತಂಕದ ನೆಪ ಹೇಳಿ ಸರ್ಕಾರ ನಮ್ಮ ಪಾದಯಾತ್ರೆ ತಡೆಯಲು ಇಂತಹ ಆದೇಶ ಹೊರಡಿಸಿದೆ. ಇದು ಒಮಿಕ್ರಾನ್ ಅಲ್ಲ, ಬಿಜೆಪಿ ಕಾಯಿಲೆ. ಕಾಂಗ್ರೆಸ್ ಹೋರಾಟವನ್ನು ತಡೆಯಲು ಇಂತಹ ಯೋಜನೆ ರೂಪಿಸುತ್ತಿದೆ. ಮೇಕೆದಾಟು ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಸೋಮವಾರದಿಂದ ಯಾವ ಕರ್ಫ್ಯೂ ಕೂಡ ಇರಲ್ಲ. ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ಅದು ನನ್ನ ಊರು. ನಾವು ನಡೆಯುತ್ತೇವೆ. ಹೋಟೆಲ್ ಗಳನ್ನು ಬಂದ್ ಮಾಡಿದರೂ ತೊಂದರೆಯಿಲ್ಲ. ನಾವು ಪ್ರಕೃತಿ ಮಡಿಲಲ್ಲಿ ಮಲಗುತ್ತೇವೆ. ಸಾವಿರ ಅಲ್ಲ, 5 ಸಾವಿರ ಜನ ನಡೆದರೂ ಅವರಿಗೆ ಆಶ್ರಯ ನೀಡುವ ಶಕ್ತಿ ಅಲ್ಲಿನ ಜನರಿಗಿದೆ. ಹೊಲವಿದೆ, ಜಮೀನಿದೆ. ಹೊಳೆ ನದಿ ಪಕ್ಕ ನಾವು ವಾಸ್ತವ್ಯ ಮಾಡುತ್ತೇವೆ. ಪಾದಯಾತ್ರೆ ತಡೆಯಲೆಂದು ನಮ್ಮನ್ನು ಒಂದು ದಿನ ಬಂಧಿಸಬಹುದು ಆದರೆ ನಮ್ಮ ಹೋರಾಟ ನಿಲ್ಲಲ್ಲ. ಒಂದು ವೇಳೆ ಯಾರೂ ಇಲ್ಲವೆಂದರೆ ಇಬ್ಬರೇ ಆದ್ರೂ ಪಾದಯಾತ್ರೆ ಮಾಡುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ನಿಯಮಗಳಿಗೆ ನಾವೂ ಗೌರವ ಕೊಡುತ್ತೇವೆ. ಆದರೆ ದುರುದ್ದೇಶಗಳನ್ನು ಸಹಿಸಲ್ಲ, ಸಭೆ-ಸಮಾರಂಭಕ್ಕೆ ಅವಕಾಶವಿಲ್ಲ ಎಂದು ನಿಯಮ ಮಾಡಿದವರು ಇಂದು ಹೊಸ ಎಂಎಲ್ ಸಿಗಳ ಪ್ರಮಾಣವಚನ ಸ್ವೀಕಾರಕ್ಕೆ ಯಾಕೆ ಅವಕಾಶಕೊಟ್ಟರು? ವರ್ಚುವಲ್ ಮಾಡಿಕೊಂಡು ಶಾಸಕರು, ಎಂಎಲ್ ಸಿಗಳನ್ನು ಕರೆದು ಪ್ರಮಾಣವಚನವನ್ನು ಅಸೆಂಬ್ಲಿ ಒಳಗೆ ಮಾಡಬೇಕಿತ್ತು. ಪ್ರಮಾಣವಚನ ಸ್ವೀಕಾರ ಸಮಾರಂಭ ಮಾಡಿದ್ದೂ ಅಲ್ಲದೇ ಇಷ್ಟೊಂದು ಜನಸೇರುವಂತೆ ಮಾಡಿದ್ದು ತಪ್ಪಲ್ಲವೇ? ಈ ಬಗ್ಗೆ ಸಿಎಂ ಬೊಮ್ಮಾಯಿ ಉತ್ತರಿಸಲಿ. ನೀರಿಗಾಗಿ, ರಾಜ್ಯದ ಜನತೆಗಾಗಿ ನಮ್ಮ ಹೋರಾಟ. ಸರ್ಕಾರದ ಯಾವ ಗೊಡ್ಡು ಬೆದರಿಕೆಗಳಿಗೂ ಹೆದರಲ್ಲ, ನಮ್ಮ ಹೋರಾಟ ಮುಂದೂಡುವುದೂ ಇಲ್ಲ ಎಂದು ಹೇಳಿದ್ದಾರೆ.