ಬೆಂಗಳೂರು: ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಅನಿರೀಕ್ಷಿತ ಬೆಳವಣಿಗೆ. ಪಕ್ಷ ಘೋಷಣೆ ವಿಚಾರವನ್ನು ಅವರು ವಾಪಸ್ ಪಡೆಯಲಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಜನಾರ್ಧನ ರೆಡ್ಡಿ ತಮ್ಮ ನಿಲುವು ಬದಲಿಸಬೇಕು. ಅವರು ಬೇರೆ ಪಕ್ಷ ಸ್ಥಾಪಿಸುವುದು ಬೇಡ. ನಮ್ಮೊಂದಿಗೆ ಇರಬೇಕು. ಜನಾರ್ಧನ ರೆಡ್ಡಿ ಕಷ್ಟಪಟ್ಟು ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವು ಒಗ್ಗಟ್ಟಿನಲ್ಲಿ ಮುಂದೆ ಸಾಗಬೇಕು. ರೆಡ್ಡಿಯವರು ಹೊಸ ಪಕ್ಷ ಘೋಷಣೆ ನಿರ್ಧಾರ ವಾಪಸ್ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇತ್ತೀಚೆಗೆ ಬಳ್ಳಾರಿಗೆ ಹೋದಾಗ ಜನಾರ್ಧನ ರೆಡ್ಡಿ ಅವರನ್ನು ಭೇಟಿಯಾಗಿದ್ದೆ. ಆ ವೇಳೆ ಕೆಲವೊಂದು ವಿಚಾರ ಹಂಚಿಕೊಂಡಿದ್ದರು. ಅವರಿಗೆ ಬಿಜೆಪಿ ಮೇಲೆ ಯಾವುದೇ ಮನಸ್ತಾಪವಿಲ್ಲ. ಆದರೆ ವೈಯಕ್ತಿಕವಾಗಿ ಬೇಸರವಿತ್ತು. ಈ ವಿಚಾರವನ್ನು ಸಿಎಂ ಹಾಗೂ ರಾಜ್ಯಾಧ್ಯಕ್ಶರ ಜೊತೆಯೂ ನಾನು ಮಾತನಾಡಿದ್ದೆ. ಈಗ ಏಕಾಏಕಿ ಹೊಸ ಪಕ್ಷ ಘೋಷಿಸಿರುವುದು ಅನಿರೀಕ್ಷಿತ ಬೆಳವಣಿಗೆ ಎಂದರು.
ಪ್ರಾದೇಶಿಕ ಪಕ್ಷ ಕಟ್ಟುವುದು. ಅದನ್ನು ಯಶಸ್ವಿ ಮಾಡುವುದು ಬಹಳ ಕಷ್ಟ. ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿಯವರು ರಾಜ್ಯ ಹಾಗೂ ಕೇಂದ್ರದಲ್ಲಿ ಉತ್ತಮ ಆಡಳಿತ ನೀಡಿತ್ತಿದ್ದಾರೆ. ಹೀಗಿರುವಾಗ ರೆಡ್ದಿ ಈ ರೀತಿ ಯಾಕೆ ಆಲೋಚಿಸಿದರು ಗೊತ್ತಿಲ್ಲ. ಈ ಬಗ್ಗೆ ಹಿರಿಯರ ಜೊತೆ ಮತ್ತೊಮ್ಮೆ ಮಾತನಾಡಿ ರೆಡ್ದಿಯವರನ್ನು ಮನವೊಲಿಸಲಾಗುವುದು. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂಬುದೇ ನಮ್ಮ ಆಶಯ. ಜನಾರ್ಧನ ರೆಡ್ದಿ ತಮ್ಮ ನಿಲುವು ಬದಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.