57 ವರ್ಷದ ವ್ಯಕ್ತಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು ಜೆನಿಟಿಕ್ನಲ್ಲಿ ಮಾರ್ಪಾಡು ಮಾಡಲಾದ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಈ ರೀತಿ ಪ್ರಾಣಿಗಳ ಅಂಗಾಂಗಗಳನ್ನೂ ಬಳಕೆ ಮಾಡಲು ಸಾಧ್ಯವಾದರೇ ಅಂಗಾಂಗ ದಾನದ ದೀರ್ಘಕಾಲದ ಕೊರತೆಯನ್ನು ನಿವಾರಿಸಬಹುದಾಗಿದೆ.
ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯನ್ನು ಶುಕ್ರವಾರ ಮಾಡಲಾಗಿದೆ ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯ ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. ಈ ಶಸ್ತ್ರಚಿಕಿತ್ಸೆಯು ಪ್ರಾಣಿಗಳ ಅಂಗಾಂಗವನ್ನು ಮನುಷ್ಯನಿಗೆ ಕಸಿ ಮಾಡುವ ಪ್ರಕ್ರಿಯೆ ಪ್ರಮುಖ ಮೈಲಿಗಲ್ಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಡೇವಿಡ್ ಬೆನೆಟ್ ಎಂಬ ರೋಗಿಯು ಮಾನವನ ಹೃದಯವನ್ನು ಕಸಿ ಮಾಡಿಸಿಕೊಳ್ಳಲು ಅನರ್ಹ ಎಂದು ಪರಿಗಣಿಸಲಾಗಿತ್ತು. ಡೇವಿಡ್ ಅತ್ಯಂತ ಕಳಪೆ ಆರೋಗ್ಯದ ಸ್ಥಿತಿಯನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಇಂತಹದ್ದೊಂದು ಐತಿಹಾಸಿಕ ಪ್ರಯತ್ನವನ್ನು ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.
ಇದೀಗ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು ಡೇವಿಡ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ದೇಹದಲ್ಲಿರುವ ಹೊಸ ಅಂಗಾಂಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವೀಕ್ಷಿಸುವ ಸಲುವಾಗಿ ಡೇವಿಡ್ರನ್ನು ನಿಗಾದಲ್ಲಿ ಇಡಲಾಗಿದೆ.
ಮೇರಿಲ್ಯಾಂಡ್ನ ನಿವಾಸಿಯಾದ ರೋಗಿ ಡೇವಿಡ್ ಬೆನೆಟ್ ಶಸ್ತ್ರಚಿಕಿತ್ಸೆಗೂ ಮುನ್ನ, ನನ್ನ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪ್ರಯತ್ನವಾಗಿದೆ. ಇದೊಂದು ರೀತಿಯಲ್ಲಿ ಕತ್ತಲೆಯಲ್ಲಿ ಗುಂಡು ಹಾರಿಸಿದಂತೆ ಎಂದು ನನಗೆ ತಿಳಿದಿದೆ. ಆದರೆ ನಾನು ಬದುಕಲು ಬಯಸುತ್ತೇನೆ. ಆದರೆ ನನ್ನ ಪಾಲಿಗೆ ಇದು ಕೊನೆಯ ಆಯ್ಕೆಯಾಗಿದೆ ಎಂದು ಹೇಳಿದ್ದರು ಎನ್ನಲಾಗಿದೆ.