ಕೊಪ್ಪಳ; ಪಿಎಫ್ ಐ ಸಂಘಟನೆ ಮುಖಂಡರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಬಂಧಿತರು ಆಕ್ರೋಶ ವ್ಯಕ್ತಪಡಿಸಿದ್ದು, ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿಯೂ ದಾಳಿ ನಡೆಸಿರುವ ಪೊಲೀಸರು ಪಿಎಫ್ ಐ ರಾಜ್ಯ ಸಂಚಾಲಕ ಸರ್ಫರಾಜ್ ಹಾಗೂ ಸಂಘಟಕ ರಸೂಲ್ ನನ್ನು ಬಂಧಿಸಿದ್ದಾರೆ. ಈ ವೇಳೆ ಆರ್ ಎಸ್ ಎಸ್ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಸರ್ಪರಾಜ್, ಇಡೀ ವ್ಯವಸ್ಥೆಯೇ ಆರ್ ಎಸ್ ಎಸ್ ಕೈಗೊಂಬೆಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಕ್ಕೆ ನಮಗೆ ಈ ಗತಿ ಬಂದಿದೆ. ಇದಾವುದಕ್ಕೂ ನಾವು ಹೆದರಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿರುವ ರಸೂಲ್, ನಾವು ನಿಮ್ಮ ಜೈಲಿಗೆಲ್ಲ ಹೆದರುವವರಲ್ಲ, ಸರ್ಕಾರ ವನ್ನು ಪ್ರಶ್ನೆ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ ಬಂಧಿತ ಪಿಎಫ್ ಐ ಮುಖಂಡರಾದ ಸರ್ಫರಾಜ್ ಹಾಗೂ ರಸೂಲ್ ಇಬ್ಬರನ್ನು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.