ಕೊರೊನಾ ಸಾಂಕ್ರಾಮಿಕದ ಬಳಿಕ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಶ್ರೀಲಂಕಾದಲ್ಲಿರೋ ದುಸ್ಥಿತಿಯನ್ನು ನೋಡಿದ ಮೇಲಂತೂ ಎಲ್ಲರಲ್ಲೂ ಆತಂಕ ಶುರುವಾಗಿದೆ. ಬೆಲೆ ಏರಿಕೆಯಿಂದಾಗಿ ಬ್ಯಾಂಕ್ಗಳು ಕೂಡ ಅನಿವಾರ್ಯವಾಗಿ ಬಡ್ಡಿದರ ಹೆಚ್ಚಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿವೆ.
ಈ ಎಲ್ಲಾ ಬೆಳವಣಿಗೆಯನ್ನು ನೋಡ್ತಿದ್ರೆ ಭಾರತ ಕೂಡ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಬಹುದು ಅನ್ನೋ ಚರ್ಚೆಗಳು ಸಹ ಆರಂಭವಾಗಿದ್ದವು. ಆದ್ರೆ ಭಾರತೀಯರು ಆತಂಕಪಡಬೇಕಾಗಿಲ್ಲ. ಸಮೀಕ್ಷೆಯೊಂದರ ಪ್ರಕಾರ ಸದ್ಯಕ್ಕಂತೂ ಭಾರತ ಆರ್ಥಿಕ ತೊಂದರೆಗೆ ಈಡಾಗುವುದೇ ಇಲ್ಲ. ಇನ್ನೊಂದು ವರ್ಷದಲ್ಲಿ ಏಷ್ಯಾದ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಕೇವಲ ಶೇ. 20 ರಿಂದ 25ರಷ್ಟಿದೆ.
ಶ್ರೀಲಂಕಾ ಈಗಾಗ್ಲೇ ಆರ್ಥಿಕವಾಗಿ ಸಂಪೂರ್ಣ ನಲುಗಿದ್ದು ಇನ್ನೊಂದು ವರ್ಷದಲ್ಲಿ ರಿಸೆಶನ್ಗೆ ತುತ್ತಾಗುವ ಸಾಧ್ಯತೆ ಶೇ.85ರಷ್ಟಿದೆ. ಸಮೀಕ್ಷೆಯ ಪ್ರಕಾರ ನ್ಯೂಜಿಲೆಂಡ್, ತೈವಾನ್, ಆಸ್ಟ್ರೇಲಿಯಾ ಮತ್ತು ಫಿಲಿಪೈನ್ಸ್ನಲ್ಲಿ ಕೂಡ ರಿಸೆಶನ್ ಬರುವ ಸಾಧ್ಯತೆ ಇದೆ. ಇನ್ನೊಂದು ವರ್ಷದಲ್ಲಿ ಚೀನಾ ರಿಸೆಶನ್ ಎದುರಿಸುವ ಸಾಧ್ಯತೆ ಶೇ.20ರಷ್ಟಿದ್ದು, ದಕ್ಷಿಣ ಕೊರಿಯಾ ಮತ್ತು ಜಪಾನ್ನಲ್ಲಿ ರಿಸೆಶನ್ ಬರುವ ಸಾಧ್ಯತೆ ಶೇ.25ರಷ್ಟಿದೆ.
ಅಮೆರಿಕ ರಿಸೆಶನ್ ಎದುರಿಸುವ ಸಾಧ್ಯತೆ ಶೇ.40ರಷ್ಟಿದ್ದು, ಯುರೋಪ್ ಕೂಡ ಅಪಾಯದಲ್ಲಿದೆ. ಆದ್ರೆ ಇವೆಲ್ಲದರ ಪರಿಣಾಮ ಭಾರತದ ಮೇಲೆ ಹೆಚ್ಚೇನೂ ಆಗುವುದಿಲ್ಲ, ಪರಿಣಾಮ ಉಂಟಾದ್ರೂ ಕೇವಲ ಅಲ್ಪ ಸಮಯಕ್ಕೆ ಸೀಮಿತವಾಗಿರುತ್ತದೆ ಅನ್ನೋದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ರಿಸೆಶನ್ನಿಂದ ಜಗತ್ತಿನಾದ್ಯಂತ ದಿನಬಳಕೆ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಅನ್ನೋದು ತಜ್ಞರ ನಿರೀಕ್ಷೆ. ರಿಸೆಶನ್ನಿಂದ ಭಾರತದ ರಫ್ತು ಉದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.