ಮೈಸೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬೇಕೆಂದಲೇ ನನ್ನನ್ನು ಪ್ರಚೋದಿಸುವ ಯತ್ನ ನಡೆಸಲಾಗುತ್ತಿದೆ. ಇಂದ್ರಜಿತ್ ಗೆ ಧೈರ್ಯವಿದ್ದರೆ ಇಂದು ಸಂಜೆಯೇ ನನ್ನ ಆಡಿಯೋ ದಾಖಲೆ ಬಿಡುಗಡೆ ಮಾಡಲಿ ಎಂದು ನೇರವಾಗಿ ಸವಾಲು ಹಾಕಿದ್ದಾರೆ.
ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ಇಂದ್ರಜಿತ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ನನ್ನನ್ನು ಅನ್ ಎಜುಕೇಟೆಡ್ ಎಂದು ಹೇಳಿದ್ದಾರೆ. ನಾನು 10ನೇ ಕ್ಲಾಸ್ ಪಾಸ್. 170 ರೂ. ನಿಂದ ನಾನು ಕೆರಿಯರ್ ಆರಂಭಿಸಿದ್ದೇನೆ. ಇಂದು ಇಲ್ಲಿಯವರೆಗೆ ಬೆಳೆದು ನಿಲ್ಲಲು ನಾನು ಪಟ್ಟ ಪರಿಶ್ರಮ, ದುಡಿಮೆ ಕಾರಣ. ನಾನು ಕುರುಕ್ಷೇತ್ರ ಮಾಡಲು ರೆಡಿ, ಮೆಜೆಸ್ಟಿಕ್ ಮಾಡಲು ಸಿದ್ಧ. ಚಕ್ಕಡಿ ಗಾಡಿ ಓಡಿಸಲು ಸೈ, ದನಗಳನ್ನು ಕಟ್ಟಿ ಹಾಲು ಕರೆಯಲು ಸೈ. ಇಂದ್ರಜಿತ್ ಎಜುಕೇಟೆಡ್, ಓರ್ವ ಪತ್ರಕರ್ತನಾಗಿ ಲಾಯರ್ ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸುತ್ತಿರುವುದೇಕೆ? ಯೋಗ್ಯತೆ ಇದ್ದರೆ ಒಂದೇ ಒಂದು ಸಿನಿಮಾ ನಿರ್ದೇಶನ ಮಾಡಿ ತೋರಿಸಲಿ. ನನ್ನ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರೆಕಾರ್ಡ್ ನ್ನು ಸಂಜೆಯೊಳಗೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
‘ದೊಡ್ಮನೆ’ ಬಗ್ಗೆ ಮಾತಾಡಿದ್ದಕ್ಕೆ ‘ಡಿ ಬಾಸ್’ ಕೆಂಡಾಮಂಡಲ: ಉಮಾಪತಿ, ಇಂದ್ರಜಿತ್ ವಿರುದ್ಧ ಆಕ್ರೋಶ
ಇದೇ ವೇಳೆ ನಿರ್ಮಾಪಕ ಉಮಾಪತಿ ವಿರುದ್ಧವೂ ಗುಡುಗಿರುವ ದರ್ಶನ್, ಅನಗತ್ಯವಾಗಿ ದೊಡ್ಮನೆ ವಿಚಾರ ಎಳೆದು ತರಲಾಗುತ್ತಿದೆ. ಉಮಾಪತಿ ವಿಷಯಗಳನ್ನು ಡೈವರ್ಟ್ ಮಾಡಲು ಹೀಗೆ ಮಾಡುತ್ತಿದ್ದಾರೆ. 25 ಕೋಟಿ ವಂಚನೆಗೆ ಯತ್ನದಿಂದ ಆರಂಭವಾದ ವಿಷಯ ಈಗ ದೊಡ್ಮನೆ ಪ್ರಾಪರ್ಟಿವರೆಗೆ ಬಂದು ನಿಂತಿದೆ. ದೊಡ್ಮನೆ ವಿಚಾರ ಬರುತ್ತಿರುವುದಕ್ಕೆ ಮಾತನಾಡಬೇಕಾದ ಅನಿವಾರ್ಯತೆ ಬಂದಿದೆ. ನಾನೂ ಕೂಡ ದೊಡ್ಮನೆ ಊಟ ತಿಂದು ಬೆಳೆದವನು. ಈ ಘಟನೆಗಳಿಗೂ ದೊಡ್ಮನೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆ ಪ್ರಕರಣ ದೊಡ್ಮನೆಯತ್ತ ಹೋಗುತ್ತಿದೆ? ಬೇಕಂತಲೇ ನಿರ್ಮಾಪಕರು ವಿಷಯ ಡೈ ವರ್ಟ್ ಮಾಡುತ್ತಿದ್ದಾರೆ. ವಂಚನೆಗೆ ಯತ್ನ ಪ್ರಕರಣ ಮೊದಲು ತನಿಖೆ ಮಾಡಲಿ. ಅನಗತ್ಯವಾಗಿ ವಿಷಯಾಂತರ ಮಾಡುವುದು ಬೇಡ ಎಂದು ಹೇಳಿದರು.