ಇತ್ತೀಚೆಗೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆಗೆ ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಉಭಯ ರಾಜ್ಯಗಳಲ್ಲಿ ಬಹುತೇಕ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬ ಚಿತ್ರಣ ಸಿಗಲಿದೆ.
ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಯೇ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ಇದರ ಜೊತೆಗೆ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಕೂಡ ಪೈಪೋಟಿ ನೀಡುತ್ತಿವೆ.
ಇದರ ಮಧ್ಯೆ ಹೂಡಿಕೆದಾರರಲ್ಲೂ ಷೇರು ಮಾರುಕಟ್ಟೆಯಲ್ಲಿ ಆಗುವ ಏರಿಳಿತಗಳ ಲೆಕ್ಕಾಚಾರ ನಡೆದಿದ್ದು, ಹಲವು ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಜೆಟ್ ಮಂಡನೆ ಹಾಗೂ ಚುನಾವಣಾ ಫಲಿತಾಂಶ ಕೂಡಾ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಕಾರಣ ಈ ಚರ್ಚೆ ನಡೆಯುತ್ತಿದೆ.
ಪ್ರಮುಖ ಸಂಗತಿ ಎಂದರೆ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಗೌತಮ್ ಅದಾನಿ, ಮುಖೇಶ್ ಅಂಬಾನಿ ಮೊದಲಾದವರು ಗುಜರಾತ್ ಮೂಲದವರೇ ಎಂಬುದು ಗಮನಾರ್ಹ ಸಂಗತಿ. ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯಾಗದಿದ್ದರೂ ಸಹ ಒಂದಷ್ಟು ಪರಿಣಾಮ ಬೀರುವುದು ಖಚಿತ.