ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದು, ಬಿಜೆಪಿ ಈವರೆಗೂ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಇಂದು ಸಂಜೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ವಿಪಕ್ಷ ನಾಯಕನ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.
ಈ ಸಭೆಗೆ ಕೇಂದ್ರ ವೀಕ್ಷಕರಾದ ವಿನೋದ್ ತಾವಡೆ ಹಾಗೂ ಕೇಂದ್ರ ಸಚಿವರ ಮನ್ಸುಖ್ ಮಾಂಡವೀಯ ಆಗಮಿಸಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಪಕ್ಷದ ಹೈಕಮಾಂಡ್ ಗೆ ತಮ್ಮ ವರದಿ ಸಲ್ಲಿಸಲಿದ್ದಾರೆ ಎನ್ನಲಾಗಿದ್ದು, ಬಳಿಕವಷ್ಟೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಹೆಸರು ಘೋಷಣೆಯಾಗಲಿದೆ.
ಮೂಲಗಳ ಪ್ರಕಾರ ಲಿಂಗಾಯಿತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಹೈಕಮಾಂಡ್ ಒಲವು ಹೊಂದಿದೆ ಎನ್ನಲಾಗಿದ್ದು, ಒಂದೊಮ್ಮೆ ಲಿಂಗಾಯತೇತರ ಸಮುದಾಯವನ್ನು ಪರಿಗಣಿಸುವ ಸಂದರ್ಭದಲ್ಲಿ ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಂದು ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಅಂತಿಮ ನಿರ್ಧಾರ ಹೊರ ಬೀಳಲಿದೆ.